ಕನ್ನಡ ಬೆಳ್ಳಿತೆರೆ ಮೇಲೆ ಜನನಾಯಕ ಕುಮಾರಣ್ಣ
ಚುನಾವಣೆಯ ಹೊಸ್ತಿಲಲ್ಲಿ ಮತದಾರರಲ್ಲಿ ಸಾಕ್ಷಾತ್ ದೇವರನ್ನು ಕಾಣುವ ರಾಜಕೀಯ ಮುಖಂಡರು ಹೊಸ ಹೊಸ ಪ್ರಚಾರ ಕಾರ್ಯಕ್ಕೆ ಮುಂದಾಗುವುದು ಹೊಸದೇನಲ್ಲ. ಅದನ್ನು ತಿಳಿಯದಷ್ಟು ಮತದಾರರೂ ದಡ್ಡರೂ ಅಲ್ಲ.
ರಾಜಕೀಯ ನಾಯಕರಿಗೆ ಸಿಂಹಸ್ವಪ್ನರಾಗಿದ್ದ ಟಿ ಎನ್ ಶೇಷನ್ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಸಮಯದಲ್ಲಿ ತೆಗೆದುಕೊಂಡು ಕೆಲವು ಡೈನಾಮಿಕ್ ನಿರ್ಧಾರಗಳನ್ನು ಇಲ್ಲಿವರೆಗೂ ಚುನಾವಣಾ ಆಯೋಗ ಪಾಲಿಸಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಪಕ್ಷಗಳು ವಿಭಿನ್ನ ತಂತ್ರಕ್ಕೆ ಮೊರೆಹೊಗದೇ ಬೇರೆ ದಾರಿ ಉಳಿದುಕೊಂಡಿಲ್ಲ.
ಜನಪ್ರಿಯ ಮಕ್ಕಳ ಆಟಿಕೆಗಳು, ಕೊಡುಗೆ ವಸ್ತುಗಳ ಮೇಲೆ ಪಕ್ಷದ ಲಾಂಛನಗಳನ್ನು ಒತ್ತಿ ಮತದಾರರಿಗೆ ತಲುಪಿಸುವುದು, ಅಭ್ಯರ್ಥಿಗಳ ಭಾವಚಿತ್ರವಿರುವ ಟಿ-ಶರ್ಟ್, ಕ್ಯಾಪ್, ಬ್ಯಾಟ್, ಬಂಟಿಂಗ್, ಶಲ್ಯ, ಬಾವುಟ, ಛತ್ರಿ, ಗೋಡೆ ಗಡಿಯಾರ ವಿತರಿಸುವುದು, ಅಕ್ಕಿ, ಬೇಳೆ ಮುಂತಾದ ದಿನಸಿ ಪದಾರ್ಥಗಳನ್ನು ನೀಡಿ ಮತದಾರರನ್ನು ಓಲೈಸುವುದು ಮಾಮೂಲು.
ಬ್ಯಾನರ್, ಭಿತ್ತಿಚಿತ್ರ ಅಂಟಿಸುವುದರ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿದ ಹಿನ್ನಲೆಯಲ್ಲಿ ಮತದಾರರನ್ನು ತಲುಪಲು ರಾಜಕೀಯ ಪಕ್ಷಗಳು ಹೊಸ ಬಗೆಯ ಕಸರತ್ತು ನಡೆಸ ಬೇಕಾಗಿರುವುದು ಈ ಬಾರಿಯ ಚುನಾವಣೆಯಲ್ಲಿ ಅನಿವಾರ್ಯ.
ಈ ಪ್ರಕ್ರಿಯೆಯಲ್ಲಿ ಒಂದು ಹೆಜ್ಜೆ ಮುಂದು ಹೋಗಿರುವ ಜೆಡಿಎಸ್ ಮತದಾರರನ್ನು ಓಲೈಸಿಕೊಳ್ಳಲು ಬಳಸಿಕೊಂಡ ಪ್ರಭಾವಿ ಮತ್ತು ಸಾಮಾಜಿಕ ಮಾಧ್ಯಮವೆಂದರೆ ಬೆಳ್ಳಿತೆರೆಯ ಮೇಲೆ ಪ್ರಚಾರ. ಇದಕ್ಕೆ ಸ್ಕ್ರೀನ್ ಪ್ಲೇ ಮತ್ತು ನಿರ್ದೇಶನದ ಮುನ್ನುಡಿ ಬರೆದವರು ಚಿತ್ರ ನಿರ್ದೇಶಕ ಮತ್ತು ಕುಮಾರಸ್ವಾಮಿ ಆಪ್ತರಾಗಿರುವ ಕಲಾ ಸಾಮ್ರಾಟ್ ಎಸ್ ನಾರಾಯಣ್.

ಬೆಳ್ಳಿತೆರೆ ಮೇಲೆ ಪ್ರಚಾರ ಹೇಗೆ
ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಮುನ್ನ ಮತ್ತು ಮಧ್ಯಂತರದ ವೇಳೆಯಲ್ಲಿ 'ಜನ ನಾಯಕ ಕುಮಾರಣ್ಣ' ಎನ್ನುವ ಶೀರ್ಷಿಕೆಯಡಿಯಲ್ಲಿ ಈ ಜಾಹೀರಾತು ಬರಲಿದೆ.

ಬೆಳ್ಳಿತೆರೆ ಮೇಲೆ ಪ್ರಚಾರ ಹೇಗೆ
ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿಯಲ್ಲಿ ಅವರ ಸರಕಾರದ ಸಾಧನೆಗಳನ್ನು ಬಿಂಬಿಸುವ ಒಂದು ನಿಮಿಷದ ವಿಡಿಯೋ ಪ್ರದರ್ಶನಗೊಳ್ಳಲಿದ್ದು ಇದರ ಪರಿಕಲ್ಪನೆ ಎಸ್ ನಾರಾಯಣ್ ಅವರದ್ದು.

ಬೆಳ್ಳಿತೆರೆಯ ಎಷ್ಟು ಚಿತ್ರಮಂದಿರದಲ್ಲಿ ಜಾಹೀರಾತು
ರಾಜ್ಯದ ಸುಮಾರು 900ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಜಾಹೀರಾತು ಪ್ರದರ್ಶನಗೊಳ್ಳಲಿದೆ. ದಿನವೊಂದಕ್ಕೆ ನಾಲ್ಕು ಪ್ರದರ್ಶನದಂತೆ ಲಕ್ಷಾಂತರ ಸಿನಿಮಾ ವೀಕ್ಷಕರ ಮೂಲಕ ಜೆಡಿಎಸ್ ಪರ ಮತಯಾಚನೆ.

ಎಸ್ ನಾರಾಯಣ್ ಏನು ಹೇಳುತ್ತಾರೆ?
ಈ ಕಲ್ಪನೆ ನನ್ನದು. ವಿಭಿನ್ನ ರೀತಿಯಲ್ಲಿ ಜನರನ್ನು ತಲುಪುವುದು ಹೇಗೆ ಎಂದು ಆಲೋಚಿಸುತ್ತಿದ್ದಾಗ ಈ ಪ್ಲಾನ್ ಹೊಳೆಯಿತು. ಪ್ರತೀ ಪ್ರದರ್ಶನಕ್ಕೂ ಹೊಸ ವೀಕ್ಷಕರು ಬರುವುದರಿಂದ ಜನರಿಗೆ ಜೆಡಿಎಸ್ ಪಕ್ಷದ ಸಂದೇಶ ಶೀಘ್ರವಾಗಿ ತಲುಪಿಸಬಹುದು.

ರೈಲಿನಲ್ಲಿ, ಆಟೋ, ಕೇಬಲ್ ಟಿವಿಗಳಲ್ಲೂ
ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುವ ರೈಲಿನಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಲು ಜೆಡಿಎಸ್ ಸಿದ್ದತೆ ನಡೆಸಿದೆ. ಇದಲ್ಲದೇ ಕೇಬಲ್ ಟಿವಿ, ಆಟೋರಿಕ್ಷಾಗಳ ಮೂಲಕ 'ಜನ ನಾಯಕ ಕುಮಾರಣ್ಣ' ಜಾಹೀರಾತು ಪ್ರದರ್ಶನ ಮಾಡಲು ಸಕಲ ಸಿದ್ದತೆ ಪೂರ್ಣಗೊಂಡಿದೆ.












Click it and Unblock the Notifications