ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ವರ್ಷಗಳಲ್ಲಿ ಬೆಂಗಳೂರು ಅರ್ಧಕ್ಕರ್ಧ ಖಾಲಿ!

By Prasad
|
Google Oneindia Kannada News

ಬೆಂಗಳೂರು, ಏ. 13 : ತೀವ್ರ ನೀರಿನ ಕೊರತೆ ಮತ್ತು ಮಲಿನವಾಗಿರುವ ನೀರಿನಿಂದ ಹಬ್ಬುತ್ತಿರುವ ರೋಗರುಜಿನಗಳಿಂದಾಗಿ ಇನ್ನು ಹತ್ತು ವರ್ಷಗಳಲ್ಲಿ ಅರ್ದಕ್ಕರ್ಧ ಬೆಂಗಳೂರನ್ನು ರಾಜ್ಯ ಸರಕಾರ ತೆರವುಗೊಳಿಸಬೇಕಾಗುತ್ತದೆ. ಇದು ಕೇವಲ ಎಚ್ಚರಿಕೆಯಲ್ಲ ವಸ್ತುಸ್ಥಿತಿ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಒದಗುವ ವಿಪರೀತ ಪರಿಸ್ಥಿತಿಗೆ ನಾವೇ ಜವಾಬ್ದಾರರಾಗಬೇಕಾಗುತ್ತದೆ.

ಇದನ್ನು ಹೇಳಿರುವುದು ಯಾವುದೇ ಜ್ಯೋತಿಷಿಯಲ್ಲ ಅಥವಾ ಭವಿಷ್ಯಕಾರನೂ ಅಲ್ಲ. ಬೆಂಗಳೂರು ಎದುರಿಸುತ್ತಿರುವ ನೀರಿನ ಪರಿಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿರುವ ಕರ್ನಾಟಕದ ಮಾಜಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮತ್ತು ಪಾಲಿಸೀಸ್ ಮತ್ತು ಪ್ರಾಕ್ಟಿಸಸ್ ಕೇಂದ್ರದ ಚೇರ್ಮನ್ ಆಗಿರುವ ವಿ ಬಾಲಸುಬ್ರಮಣ್ಯಂ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ನಡೆಸಿದ ಪ್ರಯೋಗ ಮತ್ತು ರಾಜ್ಯ ಸರಕಾರದ ಮೈನ್ಸ್ ಮತ್ತು ಜಿಯಾಲಜಿ ಇಲಾಖೆ ಬಾಲಸುಬ್ರಮಣ್ಯಂ ಅವರ ನಡೆಸಿರುವ ಅಧ್ಯಯನವನ್ನು ಪುಷ್ಟೀಕರಿಸಿವೆ. ಇದರ ಪ್ರಕಾರ, ಶೇ.52ರಷ್ಟು ಬೋರ್‌ವೆಲ್ ನೀರು ಮತ್ತು ಶೇ.59ರಷ್ಟು ನಲ್ಲಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಮತ್ತು ನೀರಿನಲ್ಲಿ 8.4ರಷ್ಟು ಬ್ಯಾಕ್ಟೇರಿಯಾ ಸೇರಿವೆ ಎಂದು ಹೇಳಿದೆ.

Water scarcity in Bangalore : Warning bell

ಶತಮಾನಗಳ ಹಿಂದೆ ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಕೆರೆಗಳಿದ್ದವು. ಅವು ನೀರನ್ನು ಶೇಖರಿಸಿ ಅಂತರ್ಜಲ ಬತ್ತದಂತೆ ನೋಡಿಕೊಳ್ಳುತ್ತಿದ್ದವು. ಈಗ ಉಳಿದಿರುವುದು 200ಕ್ಕೂ ಕಡಿಮೆ ಕೆರೆಗಳು. ಅವಾದರೂ ಸ್ವಚ್ಛವಾಗಿವೆಯಾ? ಇರುವ ಕೆರೆಗಳೆಲ್ಲ ಶೌಚದ ನೀರಿನಿಂದ ತುಂಬಿಕೊಂಡಿವೆ. ಇದೇ ನೀರು ಅಂತರ್ಜಲದೊಂದಿಗೆ ಸೇರಿಕೊಂಡು ಬೋರ್ವೆಲ್ ಮುಖಾಂತರ ನಗರದಾದ್ಯಂತ ಸಂತರ್ಪಣೆಯಾಗುತ್ತಿದೆ.

ಸಾರಕ್ಕಿ ಅಗ್ರಹಾರದ ಕೆರೆ, ಕಂಠೀರವ ಸ್ಟೇಡಿಯಂ ಬಳಿಯಿದ್ದ ಸಂಪಂಗಿ ಕೆರೆ, ಧರ್ಮಾಂಬುಧಿ ಕೆರೆ, ಕದಿರೇನಹಳ್ಳಿ ಕೆರೆ ಮುಂದಾದವೆಲ್ಲ ಇತಿಹಾಸದ ಪುಟಗಳನ್ನು ಸೇರಿಕೊಂಡಿವೆ. ಕೆಂಗೇರಿಯಲ್ಲಿರುವ ಎರಡು ಬೃಹತ್ ಕೆರೆಗಳು ಚರಂಡಿಯಂತಾಗಿವೆ. ಮಳೆಗಾಲದಲ್ಲಿ ಅಲ್ಲಿ ನೀರು ತುಂಬದಂತಾಗಿದೆ. ಇನ್ನು ಬೇಸಿಗೆಯಲ್ಲಿ ಕೇಳುವುದೇ ಬೇಡ.

ಶೇ.30ರಷ್ಟು ಚರಂಡಿ ನೀರು ಸಂಸ್ಕರಣೆಯಾಗುತ್ತಿದೆ. ಉಳಿದ ನೀರೆಲ್ಲ ಕೆರೆಗಳನ್ನು ಸೇರಿಕೊಳ್ಳುತ್ತಿವೆ. ಎಲ್ಲಿ ನೋಡಿದಲ್ಲಿ ಕೆರೆಗಳು ಕೊಚ್ಚೆ ನೀರಿನಿಂದ ತುಂಬಿಕೊಂಡಿರುವುದು ಕಾಣುತ್ತದೆ. ಹತ್ತಿರ ಹೋದರೆ ಮೂಗು ಮುಚ್ಚಿಕೊಂಡು ಸಾಗಬೇಕು, ಆ ಸ್ಥಿತಿ ತಲುಪಿವೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಾಗಿದೆಯಾದರೂ ನೈಯಾಪೈಸೆ ಪ್ರಯೋಜನಕ್ಕೆ ಬರುತ್ತಿಲ್ಲ.

ಇನ್ನು ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಬೆಂಗಳೂರು ನಗರ ಇನ್ನು ಕೆಲವೇ ದಿನಗಳಲ್ಲಿ 1 ಕೋಟಿ ಜನಸಂಖ್ಯೆಯನ್ನು ಮೀರಿಸಲಿದೆ. ಏಳುತ್ತಿರುವ ಅಪಾರ್ಟುಮೆಂಟುಗಳು, ಯದ್ವಾತದ್ವಾ ತೋಡಲಾಗುತ್ತಿರುವ ಬೋರ್ವೆಲ್‌ಗಳು ಅಂತರ್ಜಲವನ್ನು ಬತ್ತಿಸುತ್ತಿವೆ. ಸಾಲದೆಂಬಂತೆ ಶೇ.35ರಷ್ಟು ನಗರಕ್ಕೆ ಪೂರೈಕೆಯಾಗುತ್ತಿರುವ ನೀರು ಸೋರಿಕೆಯಾಗುತ್ತಿದೆ. ಸೋರಿಕೆಯನ್ನು ತಡೆದರೆ ಸ್ವಲ್ಪವಾದರೂ ನೀರಿನ ಬವಣೆ ತಪ್ಪೀತು.

ನಗರದಲ್ಲಿ ಇರುವ 18 ಲಕ್ಷ ಮನೆಗಳಲ್ಲಿ ಕೇವಲ 44 ಸಾವಿರ ಮನೆಗಳಿಗೆ ಮಾತ್ರ ಮಳೆನೀರು ಕೊಯ್ಲು ಅಳವಡಿಸಲಾಗಿದೆ. ಉಳಿದವರು ಯಾರು ಹಣ ಖರ್ಚು ಮಾಡ್ತಾರೆ, ಹ್ಯಾಗಿದ್ರೂ ಸದ್ಯಕ್ಕೆ ನೀರು ಬರುತ್ತಿದೆ, ಮುಂದಿನ ಮಳೆಗಾಲದಲ್ಲಿ ನೋಡಿಕೊಳ್ಳೋಣ ಎಂದು ಕುರ್ಚಿಯಲ್ಲಿ ಕಾಲು ಅಲ್ಲಾಡಿಸುತ್ತ ಕುಳಿತಿದ್ದಾರೆ. ಕೆರೆಗಳು ಸತ್ತರೆ ನಗರವೂ ಸತ್ತಂತೆ ಎಂದು ಬಾಲಸುಬ್ರಮಣ್ಯಂ ಅವರು ಹೇಳಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದೆ?

English summary
If drinking water and water contamination problems are not solved immediately half of Bangalore population has to be evacuated by state govt by the end of 2013. Former additional chief secretary to Karnataka govt V Balasubramaniam has warned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X