Whatsapp ಬಳಸಿ ದೀಪಕ್ ಹತ್ಯೆಗೈದ ಮಗ

ತಂತ್ರಜ್ಞಾನ ಬಳಸಿ ಕೊಲೆ ಜಾಡನ್ನು ಅಳಿಸಿ ಹಾಕಲು ನಿತೀಶ್ ಯತ್ನಿಸಿದ್ದು ವಿಫಲವಾಗಿದೆ. ಎರಡು ವಾರಗಳ ಕಾಲ ಪೊಲೀಸರ ತಲೆಗೆ ಕೊಲೆಗೆ ಸ್ಕೆಚ್ ಹಾಕಿದ್ದು ಯಾರು ಎಂದು ತಿಳಿಯದಂತೆ ತಡೆಯುವಲ್ಲಿ ಮಾತ್ರ ನಿತೀಶ್ ಸಫಲರಾಗಿದರು.
ಆದರೆ, ಉದ್ಯಮಿ ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ಮಗ ನಿತೀಶ್ ಸೇರಿ ಮೂವರನ್ನು ದೆಹಲಿ ಪೊಲೀಸರು ಕಳೆದ ಮಂಗಳವಾರ ಬಂಧಿಸಿದ್ದಾರೆ. ತಂದೆಯನ್ನು ಕೊಲ್ಲಲು ಮಗ ನಿತೀಶ್ 6 ಕೋಟಿ ಸುಪಾರಿ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸ್ಮಾರ್ಟ್ ಫೋನ್ ಗಳಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಮೊಬೈಲ್ ಮೆಸೇಂಜಿಂಗ್ ಅಪ್ಲಿಕೇಷನ್ whatsapp ಬಳಸಿ ತನ್ನ ಸಹಚರರಿಗೆ ಸಂದೇಶಗಳನ್ನು ಕಳಿಸುತ್ತಿದ್ದ ಹಾಗೂ whats app ಮೂಲಕ ರಹಸ್ಯ ಸಂಖ್ಯೆಗೆ ನಿತೀಶ್ ಕರೆಗಳನ್ನು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸುಮಾರು 200ಕ್ಕೂ ಅಧಿಕ ಸಂಖ್ಯೆಗಳು ನಿತೀಶ್ ಹಾಗೂ ಬಲ್ಜೀತ್ ಸೆಹ್ರಾವತ್ ನಡುವೆ ಅದಲು ಬದಲಾಗಿರುವುದು ಕಂಡುಬಂದಿದೆ. ಮಾಮೂಲಿ ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ಬಳಸಿ ಕರೆ ಮಾಡಿದರೂ ಪೊಲೀಸರು ನೆಟ್ವರ್ಕ್ ಜಾಲ ಹುಡುಕಿ ಹಿಡಿದು ಹಾಕುತ್ತಾರೆ ಎಂಬ ಅರಿವಿದ್ದ ನಿತೀಶ್ whats app ತಂತ್ರಾಂಶಕ್ಕೆ ಮೊರೆ ಹೋಗಿದ್ದ.
ದೆಹಲಿ ಪೊಲೀಸರಿಗೆ ಸದ್ಯಕ್ಕೆ whats app ಕರೆ ವಿವರಗಳು ಮಾತ್ರ ಸಿಕ್ಕಿದೆ. ನಿತೀಶ್ ಹಾಗೂ ದೇವಮಾನವ, ಸಂಬಂಧಿಕರು ಹಾಗೂ ಶಾರ್ಪ್ ಶೂಟರ್ ಜೊತೆ ನಡೆಸಿದ ಚಾಟ್ ವಿವರಗಳನ್ನು ಪಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ. ನಿತೀಶ್ ಬಂಧನವಾದ ಮೇಲೆ ಮೊದಲಿನಂತೆ ಇದ್ದಿದ್ದರೆ ನಮಗೆ ಅನುಮಾನವೇ ಬರುತ್ತಿರಲಿಲ್ಲ. ಅದರೆ, ಸುಮ್ಮನೆ ಸುಳ್ಳಿನ ಹಾದಿ ಹಿಡಿದು ದಿಕ್ಕು ತಪ್ಪಿಸಲು ಹೋದ, ಹಾಗಾಗಿ ಸಿಕ್ಕಿಬಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
40 ವರ್ಷದ ಯೋಗಗುರು ಅವಿನಾಶ್ ಶಾಸ್ತ್ರಿ ಹಾಗೂ ನಾಪತ್ತೆಯಾಗಿರುವ ಸ್ವಾಮೀಜಿ ಪ್ರತಿಭಾನಂದ್ ಅವರು ಬಾಡಿಗೆ ಹಂತಕರನ್ನು ಬಳಸಿ ದೀಪಕ್ ಭಾರದ್ವಾಜ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ದೀಪಕ್ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಮುಖ್ಯ ಕಾರಣ ಎಂಬುದು ಈಗ ಸ್ಪಷ್ಟವಾಗುತ್ತಿದೆ.
ದೀಪಕ್ ಭಾರದ್ವಾಜ್ ಅವರ ಕಿರಿಯ ಪುತ್ರ ನಿತೀಶ್ ಅವರು ನಟ ಶಾರುಖ್ ಖಾನ್ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದಾರೆ. 600 ಕೋಟಿ ರು. ಆಸ್ತಿ ಎಲ್ಲರನ್ನೂ ಆರೋಪಿಗಳಾಗಿ ನೋಡುವಂತೆ ಮಾಡಿದೆ.












Click it and Unblock the Notifications