ಶಿವಮೊಗ್ಗ ಮುಸ್ಲಿಮರ ನಿಂದನೆ: ಈಶು ವಿರುದ್ಧ ಕೇಸು

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸೈಯದ್ ವಾಹೀದ್ ಅಡ್ಡು ಅವರು ವಕೀಲ ಎಟಿ ಬೆಳ್ಳಿಯಪ್ಪ ಮೂಲಕ ಈಶ್ವರಪ್ಪ ವಿರುದ್ಧ ದಾವೆ ದಾಖಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಧೀಶ ಅರ್ಜುನ್ ನಲ್ಲೂರು ಅವರು ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿದ್ದಾರೆ. ಇದರಿಂದ ಸದ್ಯಕ್ಕೆ ಚುನಾವಣೆ ಕಾಲದಲ್ಲಿ ಕಾನೂನಾತ್ಮಕವಾಗಿ ಪ್ರಕರಣವು ಈಶ್ವರಪ್ಪ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಈಶ್ವರಪ್ಪ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ವಾಹೀದ್ ಅಡ್ಡು ದೂರಿನಲ್ಲಿ ಆರೋಪಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 499 ಹಾಗೂ 500ರ ಅಡಿ ಈಶ್ವರಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ದೂರುದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅರ್ಜಿಯ ಜೊತೆ ನ್ಯಾಯಾಲಯಕ್ಕೆ ಈಶ್ವರಪ್ಪ ಭಾಷಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳ ವಿವರಗಳನ್ನು ಸಲ್ಲಿಸಲಾಗಿದೆ. ಭಾಷಣದ ಸುದ್ದಿ ಪ್ರಕಟವಾದ ದಿನಪತ್ರಿಕೆಗಳ ಪ್ರತಿ ಹಾಗೂ ಮೂವರು ಸಾಕ್ಷಿದಾರರ ವಿವರಗಳನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪವೇನು?:
ಶಿವಮೊಗ್ಗ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಎ.9ರಂದು ಉಪ ಮುಖ್ಯಮಂತ್ರಿ ಈಶ್ವರಪ್ಪ ಖಾಸಗಿ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ತಮ್ಮ ಭಾಷಣದಲ್ಲಿ ಅವರು 'ಶಿವಮೊಗ್ಗ ನಗರವೊಂದರಲ್ಲಿಯೆ ಮುಸ್ಲಿಮರು 68 ಮಂದಿ ಬ್ರಾಹ್ಮಣ ಯುವತಿಯರನ್ನು ಲವ್ ಜಿಹಾದ್ ಹೆಸರಿನಲ್ಲಿ ಅಪಹರಿಸಿದ್ದಾರೆ. ಇದಕ್ಕೆ ತಮ್ಮ ಬಳಿ ಸಾಕ್ಷಿಯಿದೆ' ಎಂದು ಹೇಳಿದ್ದಾರೆ. ಇದು ಮುಸ್ಲಿಂ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂಬುದು ಅಡ್ಡುರವರ ಆರೋಪವಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications