ಆಂಧ್ರ ಗೃಹಸಚಿವೆ ಸಬಿತಾ ಮೇಲೆ ಚಾರ್ಜ್ ಶೀಟ್

ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವೆ ಸಬಿತಾ ಅವರನ್ನು ಆರೋಪಿ 4(A-4) ಎಂದು ಹೆಸರಿಸಲಾಗಿದೆ. ಇದು ಸಿಬಿಐ ಸಲ್ಲಿಸುತ್ತಿರುವ 5ನೇ ಚಾರ್ಜ್ ಶೀಟ್ ಆಗಿದೆ. ಸಬಿತಾ ಅವರ ಮೇಲೆ ಐಪಿಸಿ ಸೆಕ್ಷನ್ 120 ಬಿ, 409, 420 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 9,12,13, 13(1) ಅಡಿಯಲ್ಲೂ ಕೇಸು ದಾಖಲಾಗಿದೆ.
ಸುಮಾರು 62 ಪುಟಗಳ ಚಾರ್ಚ್ ಶೀಟ್ ನಲ್ಲಿ 53 ಪ್ರಮುಖ ದಾಖಲೆಗಳು 47 ಸಾಕ್ಷಿಗಳು, 13 ಆರೋಪಿಗಳ ಹೆಸರಿದೆ. ಜಗನ್ ಮೋಹನ್ ರೆಡ್ಡಿ (A1), ದಾಲ್ಮಿಯಾ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪುನೀತ್ ದಾಲ್ಮೀಯಾ(A3), ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ(A5), ಗಣಿ ವಿಭಾಗ ನಿರ್ದೇಶಕ ವಿ.ಡಿ ರಾಜಗೋಪಾಲ್ (A6) ಹಾಗೂ ದಾಲ್ಮಿಯಾ ಸಂಸ್ಥೆ (A 13)
ಈಗಾಗಲೇ ಇಬ್ಬರು ಸಚಿವರು ಮೋಪಿದೇವಿ ವೆಂಕಟರಮಣ ಹಾಗೂ ಧರ್ಮಣ ಪ್ರಸಾದ್ ರಾವ್ ಆರೋಪಿಗಳಾಗಿದ್ದಾರೆ. ಮೋಪಿದೇವಿ ಕ್ಯಾಬಿನೆಟ್ ತೊರೆದು ಜೈಲು ಪಾಲಾಗಿದ್ದರೆ, ಪ್ರಸಾದ್ ರಾವ್ ಇನ್ನೂ ಕಿರಣ್ ಕುಮಾರ್ ಕ್ಯಾಬಿನೆಟ್ ನಲ್ಲಿ ರಸ್ತೆ ಅಭಿವೃದ್ಧಿ ಸಚಿವರಾಗಿದ್ದಾರೆ.
ಸರ್ಕಾರಿ ಅಧಿಕಾರಿಗಳ ಅಧಿಕಾರ ದುರುಪಯೋಗವೇ ಓಬಳಾಪುರಂ ಮೈನಿಂಗ್ ಹಗರಣ ಸೇರಿದಂತೆ ಇನ್ನಿತರ ಹಗರಣಕ್ಕೆ ನಾಂದಿ ಹಾಡಿತು. ಅಧಿಕಾರಗಳ ಮೇಲೆ ಆಗಿನ ಸಿಎಂ ವೈಎಸ್ ರಾಜಶೇಖರ ರೆಡ್ಡಿ ಅವರ ಕೃಪೆ ಇದ್ದಿರಬಹುದು ಎಂದು ಈ ಹಿಂದೆ ಸಬಿತಾ ಸಾಕ್ಷಿ ಹೇಳಿದ್ದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಜೈಲಿಗೆ ತಳ್ಳಿರುವ ಓಬಳಾಪುರಂ ಮೈನಿಂಗ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 8ನೇ ಸಾಕ್ಷಿಯಾಗಿರುವ ಸಬಿತಾ, ಹಗರಣ ನಡೆದಾಗ ಆಂಧ್ರದ ಗಣಿಗಾರಿಕೆ ಸಚಿವೆಯಾಗಿದ್ದರು. ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರು ಗಣಿ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕುವಂತೆ ಹಲವು ಬಾರಿ ದುಂಬಾಲು ಬಿದ್ದಿದ್ದರು. ನಾನು ಒಪ್ಪಲಿಲ್ಲ ಎಂದು ಹೇಳುವ ಮೂಲಕ ಆ ಪ್ರಕರಣದಿಂದ ಬಚಾವಾಗಿದ್ದರು.
ಚಾರ್ಜ್ ಶೀಟ್ ನಲ್ಲಿ ಸಬಿತಾ ಹೆಸರು ಸೇರಲು ಸಿಬಿಐ ಕೂಡಾ ಹಿಂದು ಮುಂದು ನೋಡುತ್ತಿದೆ. ಜಾತಿ ರಾಜಕಾರಣ ಆಂಧ್ರದಿಂದ ಕೇಂದ್ರದ ಮುಖಂಡರ ತನಕ ಎಲ್ಲರನ್ನು ಆಡಿಸುತ್ತಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ನ ಮುಖಂಡರು ಆರೋಪಿಸಿದ್ದರು. ಆದರೆ, ಈಗ ಸಿಬಿಐ ದಿಟ್ಟ ಹೆಜ್ಜೆ ಇಟ್ಟು ಸಬಿತಾ ಇಂದ್ರಾ ರೆಡ್ಡಿ ಅವರ ಮೇಲೆ ದೋಷಾರೋಪಣೆ ಹೊರೆಸಿದೆ.












Click it and Unblock the Notifications