ಮಂಗಳೂರು : ಗ್ಯಾಸ್ ಟ್ಯಾಂಕರ್ ಪಲ್ಪಿ ನಾಲ್ವರ ಸಾವು
ಮಂಗಳೂರು, ಏ.9 : ಎಂಪಿಆರ್ಎಲ್ ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಉಪ್ಪಿನಂಗಡಿ ಬಳಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಏಳು ಜನರು ಸಜೀವವಾಗಿ ದಹನವಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ಟ್ಯಾಂಕರ್ ಬೆಂಕಿಯನ್ನು ನಂದಿಸಲಾಗಿದೆ. ಕೆಲವು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಮಂಗಳವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಮಂಗಳೂರಿನಿಂದ ಹೊರಟ ಗ್ಯಾಸ್ ಟ್ಯಾಂಕರ್ ಉಪ್ಪಿನಂಗಡಿಯ ಪೆರ್ನೆ ಬಳಿ ಅಪಘಾತಕ್ಕೀಡಾಗಿ ಸ್ಪೋಟಗೊಂಡಿತ್ತು. ಸ್ಪೋಟದ ತೀವ್ರತೆಗೆ ಟ್ಯಾಂಕರ್ ಗೆ ತಕ್ಷಣ ಬೆಂಕಿ ಹೊತ್ತಿಕೊಂಡು, ಲಾರಿ ಚಾಲಕ ಅನಿಲ್, ಕ್ಲೀನರ್, ಓರ್ವ ಮಹಿಳೆ ಮತ್ತು ಮಗು ಸಜೀವವಾಗಿ ದಹನವಾದರು.

ರಸ್ತೆ ಮಧ್ಯದಲ್ಲಿ ಟ್ಯಾಂಕರ್ ಹೊತ್ತಿ ಉರಿಯುತ್ತಿದ್ದರಿಂದ, ಅಕ್ಕ ಪಕ್ಕದ ಮನೆಗಳಿಗೂ ಬೆಂಕಿಯ ಕೆನ್ನಾಲಿಗೆ ವಿಸ್ತರಿಸಿತು. ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ಓಮ್ನಿ ಸಹ ಬೆಂಕಿಗೆ ಆಹುತಿಯಾಯಿತು. ನಾಲ್ಕು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ.
ಟ್ಯಾಂಕರ್ ಟೈರ್ ಸ್ಫೋಟಗೊಂಡಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಬೆಂಕಿ ನಂದಿಸುವ ಕಾರ್ಯಚರಣೆ ಮುಂದುವರೆದಿದೆ.
ಇದುವರೆಗೂ ನಾಲ್ಕು ಮೃತ ದೇಹಗಳನ್ನು ಮಾತ್ರ ಗುರುತಿಸಲಾಗಿದ್ದು, ಉಳಿದವರ ಗುರುತು ಪತ್ತೆಯಾಗಿಲ್ಲ. ಸತತ ಐದು ಗಂಟೆಯ ಕಾರ್ಯಾಚರಣೆ ಬಳಿಕ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications