ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ತಯಾರು
ಬೆಂಗಳೂರು, ಏ.6 : ವಿಧಾನಸಭೆ ಚುನಾವಣೆ ಪ್ರಚಾರದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ದೆಹಲಿಯಿಂದ ವರಿಷ್ಠ ನಾಯಕರನ್ನು ಕರೆತಂದು ಮತ ಬೇಟೆಯಾಡುವ ಬಗ್ಗೆ ಯೋಜನೆ ರೂಪಿಸಿವೆ. ಹಾಗಾದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ಯಾರನ್ನು ಸ್ಟಾರ್ ಪ್ರಚಾರಕರರಾಗಿ ಕರೆಸುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಜೆಡಿಎಸ್ ಪಾಲಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತ್ರವೇ ಸ್ಟಾರ್ ಪ್ರಚಾರಕರು. ಆದರೆ, ದೇವೇಗೌಡರು ರಾಜ್ಯದ ಉದ್ದಲಗಕ್ಕೂ ತಿರುಗಾಡಿ ಪ್ರಚಾರ ಮಾಡುವಷ್ಟು ಶಕ್ತಿ ಪಡೆದಿಲ್ಲ. ಹಾಗಾಗಿ ಕುಮಾರಸ್ವಾಮಿ ಮಾತ್ರವೇ ಜೆಡಿಎಸ್ ಸ್ಟಾರ್.
ನಮಗೆ ಯಾವ ಸ್ಟಾರ್ ಪ್ರಚಾರಕರು ಬೇಕಾಗಿಲ್ಲ ಎಂದು ಸ್ವತಃ ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಆದರೆ ಜೆಡಿಎಸ್ ನ ವರಿಷ್ಠ ಎಚ್.ಡಿ.ದೇವೇಗೌಡ ಹಲವು ಸುತ್ತಿನ ಮಾತುಕತೆ ಬಳಿಕ ಕೆಲವೊಂದು ಸ್ಟಾರ್ ಪ್ರಚಾರಕರ ಪಟ್ಟಿ ತಯಾರಿಸಿದ್ದಾರೆ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್, ಎಡ ಪಕ್ಷದ ಮುಖಂಡ ಸೀತಾರಾಂ ಯೆಚೂರಿ, ಪ್ರಕಾಶ್ ಕಾರಟ್, ರಾಮ್ ವಿಲಾಸ್ ಪಾಸ್ವಾನ್ ದೇವೇಗೌಡರ ಸ್ನೇಹದಿಂದಾಗಿ ರಾಜ್ಯದಲ್ಲಿ ಪ್ರಚಾರ ಕಾರ್ಯಕ್ಕೆ ಆಗಮಿಸಲಿದ್ದಾರೆ.

ನವೀನ್ ಪಟ್ನಾಯಕ್
ಒಡಿಶಾ ರಾಜ್ಯದಲ್ಲಿ ಮೂರನೇ ಬಾರಿ ಮುಖ್ಯಮಂತ್ರಯಾಗಿ ಅಧಿಕಾರದ ಗದ್ದುಗೆ ಏರಿರುವ ಬಿಜು ಜನತಾದಳದ ಅಧ್ಯಕ್ಷ ನವೀನ್ ಪಟ್ನಾಯಕ್ ದೇವೇಗೌಡರ ಮೇಲಿನ ಸ್ನೇಹದಿಂದಾಗಿ ರಾಜ್ಯದಲ್ಲಿ ಪ್ರಚಾರ ಮಾಡಲು ಆಗಮಿಸುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಪಟ್ನಾಯಕ್ ಕರ್ನಾಟಕದಲ್ಲಿ ಜೆಡಿಎಸ್ ಗೆ ಮತ ತಂದುಕೊಡಬಹದು ಎಂಬುದು ಗೌಡರ ಲೆಕ್ಕಾಚಾರ.

ಲಾಲೂ ಪ್ರಸಾದ್ ಯಾದವ್
ಹನ್ನೊಂದು ತಿಂಗಳು ಪ್ರಧಾನಿಯಾಗಿ ದೇಶವನ್ನು ಆಳಿದ ದೇವೇಗೌಡರಿಗೆ ಕೇಂದ್ರ ನಾಯರೊಂದಿಗೆ ಉತ್ತಮವಾದ ಸಂಬಧವಿದೆ. ರೈಲ್ವೇ ಖಾತೆ ಮಾಜಿ ಸಚಿವ ಮತ್ತು ಬಿಹಾರದಲ್ಲಿ ಪ್ರಭಾವಿ ರಾಜಕಾರಣಿಯಾದ ಲಾಲೂ ತಮ್ಮ ಮಾತಿನ ಮೂಲಕ ಮೋಡಿ ಮಾಡಲು ಕರ್ನಾಟಕಕ್ಕೆ ಬರುತ್ತಿದ್ದಾರೆ.

ಪ್ರಕಾಶ್ ಕಾರಟ್
ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಎಡ ಪಕ್ಷದ ಮುಖಂಡ ಪ್ರಕಾಶ್ ಕಾರಟ್ ಸಹ ಜೆಡಿಎಸ್ ಪರವಾಗಿ ಮತಯಾಚಿಸಲು ಕರ್ನಾಟಕಕ್ಕೆ ಬರಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಕಟು ಶಬ್ದಗಳಿಂದ ಟೀಕಿಸಲು ಕಾರಟ್ ಸರಿಯಾದ ವ್ಯಕ್ತಿ.

ಸೀತಾರಾಂ ಯಚೂರಿ
ಹಿರಿಯ ಕಮ್ಯುನಿಷ್ಟ್ ಮುಖಂಡ ಸೀತಾರಾಂ ಯಚೂರಿ ಅವರಿಗೆ ಸಹ ಜೆಡಿಎಸ್ ಪರವಾಗಿ ಪ್ರಚಾರ ಮಾಡಲು ಕರ್ನಾಟಕ್ಕೆ ಬರುವಂತೆ ದೇವೇಗೌಡರು ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಯಚೂರಿಯವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಗೌಡರ ಆಹ್ವಾನ ಅವರು ತಿರಸ್ಕರಿಸಲಾರರು ಎಂಬ ಮಾಹಿತಿಯೂ ಇದೆ.

ರಾಮ್ ವಿಲಾಸ್ ಪಾಸ್ವಾನ್
ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾಸ್ ಸಹ ಜೆಡಿಎಸ್ ಮತಬೇಟೆಗಾಗಿ ರಾಜ್ಯಕ್ಕೆ ಆಗಮಿಸುವರು ಎಂದು ತಿಳಿದು ಬಂದಿದೆ. ಲೀಲಾಜಾಲವಾಗಿ ವಾಕ್ ಲಹರಿ ಹರಿಸುವ ಪಾಸ್ವಾನ್ ಜೆಡಿಎಸ್ ಗೆ ಬಲ ತುಂಬಬಹುದು ಎಂಬುದು ಗೌಡರ ಲೆಕ್ಕಾಚಾರ.

ಎಸ್.ನಾರಾಯಣ್
ಜೆಡಿಎಸ್ ಪಾಲಿಗೆ ಕರ್ನಾಟಕದಲ್ಲಿ ಬಹಳಷ್ಟು ಸಿನಿಮಾ ನಟರು ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಒಬ್ಬರು. ಉಳಿದಂತೆ ಹಾಸ್ಯ ನಟ ಟೆನಿಸ್ ಕೃಷ್ಣ, ಮಾಳವಿಕಾ ಅವಿನಾಶ್ ದಂಪತಿ ಜೆಡಿಎಸ್ ಪರವಾಗಿ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications