31 ವರ್ಷದ ನಕಲಿ ಎನ್ಕೌಂಟರ್: 3 ಪೊಲೀಸರಿಗೆ ಗಲ್ಲು!

1982ರ ಮಾರ್ಚ್ 12ರ ರಾತ್ರಿ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಮಾಧವಪುರ ಸಮೀಪದ ಗ್ರಾಮದಲ್ಲಿ ಪೊಲೀಸ್ ಎನ್ ಕೌಂಟರ್ ನಡೆದಿತ್ತು. ಪೊಲೀಸರನ್ನು ಪೊಲೀಸರೇ ಉಡಾಯಿಸಿದ ಪೈಶಾಚಿಕ ಕೃತ್ಯ ಅದಾಗಿತ್ತು. ಅಪರಾಧಿಗಳೊಂದಿಗೆ ತಮಗಿದ್ದ ಸ್ನೇಹವನ್ನು ವಿರೋಧಿಸಿದ ದಕ್ಷ ಅಧಿಕಾರಿ ಕೆಪಿ ಸಿಂಗ್ ಅವರನ್ನು ಪಾಪಿ ಪೊಲೀಸರು ನಕಲಿ ಎನ್ ಕೌಂಟರ್ ಮಾಡಿ ಸಾಯಿಸಿದ್ದರು.
ಮಾಧವಪುರದ ಇನ್ಸ್ ಪೆಕ್ಟರ್ ಆರ್ ಬಿ ಸರೋಜ್ ಎಂಬ ಅರಿವುಗೇಡಿ ಅಧಿಕಾರಿ ಈ ಹೇಯ ಘಟನೆಗೆ ಕಾರಣಕರ್ತನಾಗಿದ್ದ. ಇನ್ಸ್ ಪೆಕ್ಟರ್ ಆರ್ ಬಿ ಸರೋಜ್ ಮತ್ತು ಪೇದೆಗಳಾದ ರಮಾಕಾಂತ್ ದೀಕ್ಷಿತ್ ಮತ್ತು ರಾಮ್ ಕರಣ್ ಯಾದವ್ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪೊಲೀಸರು.
ಗಮನಾರ್ಹವೆಂದರೆ ದೀಕ್ಷಿತ್ ಸಬ್ ಇನ್ಸ್ ಪೆಕ್ಟರ್ ಆಗಿ ಇನ್ನೂ ಸೇವೆಯಲ್ಲಿದ್ದಾನೆ. ಉಳಿದಿಬ್ಬರು ನಿವೃತ್ತಿಯಾಗಿದ್ದಾರೆ. 18 ಮಂದಿಯ ವಿರುದ್ಧ ಸಿಬಿಐ ತನಿಖೆ ಕೈಗೊಂಡಿತ್ತು. ಆದರೆ ಈ 31 ವರ್ಷಗಳ ಸುದೀರ್ಘ ತನಿಖೆ ವೇಳೆ 10 ಮಂದಿ ಆರೋಪಿಗಳು ಸತ್ತೇ ಹೋಗಿದ್ದಾರೆ.
ಏನಾಗಿತ್ತು?: ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿ ಸೇರಿದಂತೆ ಒಟ್ಟು 12 ಮಂದಿ ಗ್ರಾಮಸ್ಥರನ್ನು ಗುಂಡಿಟ್ಟು ಸಾಯಿಸಲಾಗಿತ್ತು. ನಂತರ ಶವಗಳನ್ನು ಅವರಸರವಾಗಿ ಸಾಮೂಹಿಕವಾಗಿ ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲಾಗಿತ್ತು.
ಅದು ನಕಲಿ ಎನ್ ಕೌಂಟರ್ ಎಂಬುದನ್ನು 31 ವರ್ಷಗಳ ಸುದೀರ್ಘ ಕಾನೂನು ಹೋರಾಟ ಕಾಲದಲ್ಲಿ ಮೃತ ಡಿವೈಎಸ್‌ಪಿಯ ಪತ್ನಿ ಅಭಾ ಸಿಂಗ್ (ಚಿತ್ರದಲ್ಲಿರುವವರು) ನಿರೂಪಿಸುವಲ್ಲಿ ಯಶಸ್ವಿಯಾಗಿದ್ದು, ತಪ್ಪಿತಸ್ಥರಿಗೆ ತಕ್ಕ ಶಾಸ್ತಿಯಾಗುವಂತೆ ಮಾಡಿದ್ದಾರೆ.
ಘಟನೆಯನ್ನು ಪೊಲೀಸರು ಮತ್ತು ರೌಡಿಗಳ ನಡುವೆ ನಡೆದ ಗುಂಡಿನ ಚಕಮಕಿ ಎಂದು ಬಿಂಬಿಸಲಾಗಿತ್ತು. ಆದರೆ ಡಿವೈಎಸ್‌ಪಿ ಕೆಪಿ ಸಿಂಗ್ ಅವರ ಪತ್ನಿ ಅದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಆದೇಶದಂತೆ ಸಿಬಿಐ ತನಿಖೆ ನಡೆಸಿ ಪೊಲೀಸರ ಕೃತ್ಯವನ್ನು ನಕಲಿ ಎನ್‌ಕೌಂಟರ್ ಎಂದು ಸಾಬೀತುಪಡಿಸಿದೆ. ಶುಕ್ರವಾರ ಸಿಬಿಐ ಕೋರ್ಟ್ ಈ ವಿರಳ ತೀರ್ಪು ನೀಡಿದೆ.












Click it and Unblock the Notifications