ರಸ್ತೆಯಲ್ಲೇ ಬಿಜೆಪಿ ಕಾರ್ಯದರ್ಶಿ ಮೇಲೆ ರೇಪ್ ಯತ್ನ

ವಸಂತ ವಿಹಾರದಲ್ಲಿ ಈ ಘಟನೆ ನಡೆದಿದ್ದು, ಬಿಜೆಪಿ ಕಾರ್ಯದರ್ಶಿ ವಾಣಿ ತ್ರಿಪಾಠಿ ಅವರ ಮೇಲೆ ಮಾನಭಂಗ ಯತ್ನ ನಡೆದಿದೆ. ಅದೂ ಜನನಿಬಿಡ ಮಾರುಕಟ್ಟೆ ರಸ್ತೆಯಲ್ಲಿ ಈ ಘಟನೆ ನಡೆದಿರುವುದು ಮಹಿಳೆಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
'ಐದು ಮಂದಿ ಕುಡುಕರು ನನ್ನ ಕಾರಿನೊಳಕ್ಕೆ ನುಗ್ಗಲು ಯತ್ನಿಸಿದರು. ನಾನು ಒಳಗಿನಿಂದ ಲಾಕ್ ಮಾಡಿಕೊಂಡಾಗ ಆ ಕುಡುಕರು ಗಾಜುಗಳನ್ನು ಒಡೆಯಲಾರಂಭಿಸಿದರು' ಎಂದು ವಾಣಿ ತ್ರಿಪಾಠಿ ಟ್ವೀಟ್ ಮಾಡಿದ್ದಾರೆ.
'ಕೊನೆಗೆ ಆ ರಾಕ್ಷಸರಿಂದ ನನ್ನನ್ನು ಕಾಪಾಡಿದ್ದು ನನ್ನ ಕಾರಿನ ಚಾಲಕ. ನಾನು ತಕ್ಷಣ ಲಾಕ್ ಮಾಡಿಕೊಳ್ಳದಿದ್ದಿದ್ದರೆ... ನನ್ನನ್ನು ಸಾಯಿಸಿಬಿಡುತ್ತಿದ್ದರು. ನನ್ನ ಮೇಲೆ ರೇಪ್ ಸಹ ಆಗಬಹುದಿತ್ತು. ಇನ್ನೂ ಏನು ಬೇಕಾದರೂ ಆಗಬಹುದಿತ್ತು' ಎಂದು ವಾಣಿ ಹೇಳಿಕೊಂಡಿದ್ದಾರೆ.
ವಾಣಿ ಅವರ ಕಾರು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಗ ಈ ಘಟನೆ ನಡೆದಿದೆ. ದುರ್ದೈವವೆಂದರೆ ಸಾರ್ವಜನಿಕರು ಯಾರೂ ನನ್ನ ನೆರವಿಗೆ ಬರಲಿಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ' ಎಂದು ಮಾಜಿ ನಟಿಯೂ ಆದ ವಾಣಿ ಹೇಳಿಕೊಂಡಿದ್ದಾರೆ.
ಆದರೆ ಪೊಲೀಸರು ಘಟನಾ ಸ್ಥಳಕ್ಕೆ ಬರುವ ವೇಳೆಗೆ ಕುಡುಕರು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications