ಕಠಿಣ ಗಣಿತ : ಶಿಕ್ಷಣ ಇಲಾಖೆಗೆ ಹೈಕೋರ್ಟ್ ನೋಟೀಸ್

ಕೌಶಿಕ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ವರ್ಷ ರೂಪಿಸಲಾದ ಗಣಿತ ಪ್ರಶ್ನೆಪತ್ರಿಕೆ, ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಕಠಿಣವಾಗಿತ್ತು ಎಂದು ಕೌಶಿಕ್ ಅವರು ದೂರಿನಲ್ಲಿ ಹೇಳಿದ್ದು, ಇಂಥ ಪ್ರಶ್ನೆಗಳನ್ನು ಕೇಳಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಭವಿಷ್ಯವನ್ನೇ ಡೋಲಾಯಮಾನವಾಗುವಂತೆ ಮಾಡಿದೆ ಎಂದು ಕೌಶಿಕ್ ದೂರಿನಲ್ಲಿ ತಿಳಿಸಿದ್ದಾರೆ.
ಪಠ್ಯದಲ್ಲಿಯೇ ಇಲ್ಲದ ಮತ್ತು 1 ಅಂಕದ ಪ್ರಶ್ನೆಗಳನ್ನು 2 ಅಂಕಗಳಿಗೆ ಕೇಳಲಾಗಿತ್ತು. ಹಲವಾರು ಪ್ರಶ್ನೆಗಳಿಗೆ ಉತ್ತರ ತಿಳಿಯದಿದ್ದರಿಂದ ವಿದ್ಯಾರ್ಥಿಗಳು ತಬ್ಬಿಬ್ಬಾಗಿದ್ದರು. ಗ್ರಾಮೀಣ ವಿದ್ಯಾರ್ಥಿಗಳು ಮಾತ್ರವಲ್ಲ ನಗರದ ವಿದ್ಯಾರ್ಥಿಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಗಣಿತ ಪ್ರಶ್ನೆಪತ್ರಿಕೆ ಹಲವಾರು ದೋಷಗಳಿಂದ ಕೂಡಿತ್ತು ಎಂದು ಉಪನ್ಯಾಸಕರೊಬ್ಬರು ಕೂಡ ಹೇಳಿದ್ದರು. ಪ್ರಶ್ನೆಪತ್ರಿಕೆಯ ಡಿ ವಿಭಾಗದಲ್ಲಿ ಕೇಳಲಾಗಿರುವ 35ಬಿ ಪ್ರಶ್ನೆ ಪಠ್ಯದಲ್ಲಿಯೇ ಇರಲಿಲ್ಲ. ಇದೇ ಪ್ರಶ್ನೆಯನ್ನು 2010ರಲ್ಲಿ ಕೂಡ ಕೇಳಲಾಗಿತ್ತು ಮತ್ತು ಆಗ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು. ಈಗ ಅದೇ ಪ್ರಶ್ನೆ ಕೇಳಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಈಗಾಗಲೆ ಆರಂಭವಾಗಿದೆ. ಮೇ 3ರೊಳಗೆ ಫಲಿತಾಂಶ ಕೂಡ ಹೊರಬೀಳುವ ಸಂಭವನೀಯತೆ ಇದೆ. ಇಂಥ ಸಮಯದಲ್ಲಿ ಗಣಿತ ಪತ್ರಿಕೆಯ ಮರುಪರೀಕ್ಷೆಯನ್ನು ನಡೆಸಲು ಕರ್ನಾಟಕ ಹೈಕೋರ್ಟ್ ಒಪ್ಪುವುದಾ ಅಥವಾ ಕೃಪಾಂಕ ನೀಡಲು ಆದೇಶಿಸುವುದಾ ಎಂಬುದು ಸದ್ಯಕ್ಕೆ ವಿದ್ಯಾರ್ಥಿಗಳು ಕೇಳುತ್ತಿರುವ ಪ್ರಶ್ನೆ.
ಆದರೆ, ಗಣಿತ ಪತ್ರಿಕೆ ರಾಜ್ಯದ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿ ಹಾಕಿರುವುದಂತೂ ನಿಜ. ಏನು ಮಾಡಬೇಕೆಂದು ತಿಳಿಯದೆ ಎಲ್ಲ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕದಿಂದ ಕರ್ನಾಟಕ ಹೈಕೋರ್ಟ್ ನೀಡುವ ತೀರ್ಪಿನತ್ತ ನೋಡುತ್ತಿದ್ದಾರೆ.












Click it and Unblock the Notifications