ಚಿತ್ರದುರ್ಗದ ಹೆಮ್ಮೆಯ ಮೈಸೂರು ಕೆಫೆ ಇನ್ನಿಲ್ಲ
ಚಿತ್ರದುರ್ಗದ ಹಳೆ ತಲೆಗಳಿಗೆ ಚಿರಪರಿಚಿತವಾದ ಹೆಸರು ಲಕ್ಷ್ಮಿಭವನ(ಕೆಫೆ) ಹಾಗೂ ಮೈಸೂರು ಕೆಫೆ. ನಗರದ ಐತಿಹಾಸಿಕ ದ್ವಾರ ರಂಗಯ್ಯನ ಬಾಗಿಲ ಬಳಿಯ ದೊಡ್ಡಪೇಟೆಯಲ್ಲಿರುವ ಮೈಸೂರು ಕೆಫೆ ಈಗ ಇತಿಹಾಸದ ಪುಟ ಸೇರಿದೆ. 52 ವರ್ಷಗಳ ಕಾಲ ಚಿತ್ರದುರ್ಗದ ಹಿರಿಮೆಯ ಭಾಗವಾಗಿದ್ದ ಕೆಫೆ ಇಡ್ಲಿ ವಡೆ ಸೂಪ್ ಇನ್ಮುಂದೆ ನೆನಪು ಮಾತ್ರ
ಹಳೆ ಕಾಲದ ಮರದ ಕುರ್ಚಿಗಳು, ಪಾದರಸ ಆತ್ತಿತ್ತ ಅಲುಗಾಡದ ದೊಡ್ಡ ಗಾಜಿನ ಕನ್ನಡಿ, ಗಲ್ಲಾ(ಮ್ಯಾನೇಜರ್ ಕಮ್ ಕ್ಯಾಷಿಯರ್)ಪೆಟ್ಟಿಗೆಯ ಮೇಲೆ ಕುಳಿತ ನಗು ಮುಖದ ವ್ಯಕ್ತಿಯನ್ನು ಮರೆಯಲು ಸಾಧ್ಯವಿಲ್ಲ. ಈ ರೀತಿಯ ಒಂದು ಸವಿನೆನಪು ಅಲ್ಲಿ ಹೋದವರಿಗೆಲ್ಲಾ ಆಗೇ ಆಗುತ್ತದೆ.ಬೆಂಗಳೂರಿನ ಬಸವನಗುಡಿ, ಗಾಂಧೀಬಜಾರಿನ ದ್ವಾರಕ, ವಿದ್ಯಾರ್ಥಿ ಭವನ, ಮಲ್ಲೇಶ್ವರಂನ ಜನತಾ ಹೋಟೆಲ್ , ಗುಂಡಪ್ಪ ಹೋಟೆಲ್, ಬೆಣ್ಣೆ ದೋಸೆ ಹೋಟೆಲ್, ಶಕ್ತಿ ಹೋಟೆಲ್ ನಂತೆ ಚಿತ್ರದುರ್ಗ ಎಂದರೆ ಈ ಕೆಫೆ ನೆನಪಾಗುತ್ತಿತ್ತು.

1946ರಲ್ಲಿ ಉಡುಪಿ ಮೂಲದ ಅಟ್ಟೂರು ಶ್ರೀಪತಿ ಆಚಾರ್ಯ ಅವರು ಆರಂಭಿಸಿದ ಮೈಸೂರು ಕೆಫೆಯ ಇಡ್ಲಿ, ದೋಸೆ ಹಾಗೂ ಪೈನಾಪಲ್ ಕೇಸರಿ ಬಾತ್ ಜನಪ್ರಿಯತೆ ಗಳಿಸಿತ್ತು. ಭಾರದ ಮನಸ್ಸಿನಿಂದ ಕೆಫೆಗೆ ಬೀಗ ಜಡಿಯುತ್ತಿದ್ದೇನೆ. ಆದರೆ, ನಾನು ಚಿತ್ರದುರ್ಗ ಬಿಡುವುದಿಲ್ಲ. ವಯಸ್ಸಾಗಿದೆ. ದೇವರ ಸತ್ಸಂಗದಲ್ಲಿ ಕಾಲ ಕಳೆಯುತ್ತೇನೆ ಎಂದು ಕೆಫೆ ಮಾಲೀಕ ವೇದವ್ಯಾಸ ಆಚಾರ್ಯ ಅವರು ಹೇಳುವಾಗ ಅವರ ಕಣ್ಣಂಚು ತುಂಬಿ ಬಂದಿತ್ತು.
ಜನರ ಪ್ರೀತಿ ಗಳಿಸುವುದು ಮುಖ್ಯ. ಶುಚಿ, ರುಚಿಯಾದ ಆಹಾರ ನೀಡಿದರೆ ಜನ ತಪ್ಪದೇ ಬರುತ್ತಾರೆ, ವ್ಯಾಪಾರ ಎಲ್ಲವೂ ನಂತರದ ಮಾತು ಎಂದು ನನ್ನಪ್ಪ ನಾರಾಯಣ ಆಚಾರ್ಯ ಅವರು ನೀಡಿದ್ದ ಕಿವಿಮಾತನ್ನು ನಾನು ಪಾಲಿಸುತ್ತಾ ಬಂದೆ ಹೋಟೆಲ್ ಕೂಡಾ ಚೆನ್ನಾಗಿ ನಡೆಯಿತು ಎಂದು ವೇದವ್ಯಾಸ ಆಚಾರ್ಯ ಹೇಳಿದರು.
ನಮ್ಮ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅಚ್ಚುಮೆಚ್ಚಿನ ಉಪಹಾರ ಕೇಂದ್ರವಾಗಿತ್ತು. ಮೈಸೂರು ಕೆಫೆ ಹಾಗೂ ಲಕ್ಷ್ಮಿ ಭವನ ಸರಿ ಸುಮಾರು ಒಂದೆರಡು ವರ್ಷಗಳ ವ್ಯತ್ಯಾಸದಲ್ಲಿ ಪ್ರಾರಂಭವಾದ ಅನ್ನಪೂರ್ಣ ನಿಲಯಗಳು.
ಮಂಗಳೂರು, ಬೆಂಗಳೂರು ಕಡೆಯ ಹೋಟೆಲ್ ಸಂಸ್ಕೃತಿಗಿಂತ ಈ ಕಡೆಯ ಸಂಸ್ಕೃತಿ ವಿಭಿನ್ನ. ಅದರೂ ಅಚ್ಚುಕಟ್ಟುತನ, ಪರಂಪರೆ ಉಳಿಸಿಕೊಂಡು ಬರುವಲ್ಲಿ ದುರ್ಗದ ಜನರು ಯಾರಿಗೇನೂ ಕಮ್ಮಿಯಿಲ್ಲ ಎನ್ನುತ್ತಾರೆ ವೇದವ್ಯಾಸಾಚಾರ್ಯ.
ಪ್ಲೇಟ್ ಖಾಲಿ ದೋಸೆಗೆ 12ರು ಜೊತೆಗೆ ಹಿಡಿ ಮುಷ್ಟಿಯಷ್ಟು ಬೆಣ್ಣೆ ಹಾಕಿಕೊಂಡು ತಿಂದ ರುಚಿ ಮರೆಯಲು ಸಾಧ್ಯವಿಲ್ಲ. ದುರ್ಗದ ಹೆಮ್ಮೆಯ ಸಂಕೇತವಾಗಿದ್ದ ಈ ಕೆಫೆಗೆ ನಟ ವಿಷ್ಣುವರ್ಧನ್, ಅಂಬರೀಷ್, ಪುಟ್ಟಣ್ಣ ಕಣಗಾಲ್, ಶಂಕರ್ ನಾಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕೂಡಾ ಭೇಟಿ ನೀಡಿದ್ದರು ಎಂಬುದು ವಿಶೇಷ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications