ಗೋಕಾಕ್‌ದಲ್ಲಿ ಕಿಡ್ನಾಪ್ ಆದ ಬಾಲಕಿಯ ಬರ್ಬರ ಹತ್ಯೆ

ಬಾಲಕಿಯ ಕತ್ತನ್ನು ಸೀಳಿ ದೇಹವನ್ನು ಗೋಣಿಚೀಲದಲ್ಲಿ ಹಾಕಿ ಲಕ್ಷ್ಮಿನಗರದ ಬಳಿ ಹೊಲದಲ್ಲಿ ಬಿಸಾಕಲಾಗಿತ್ತು. ಅಪಹರಣಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಕೊಲೆ ನಡೆದಿದ್ದು, ಅದೇ ದಿನ ಕೊಲೆಗಡುಕನನ್ನು ಬಂಧಿಸಲಾಗಿದೆ.
ರಾತ್ರಿ ವಿಪರೀತ ಸೆಕೆಯಿದ್ದರಿಂದ ಬಾಲಕಿ ತಸ್ಮಿಯಾ (5) ತನ್ನ ಅಜ್ಜಅಜ್ಜಿಯ ಜೊತೆ ಮನೆಯ ಹೊರಗೆ ಅಂಗಳದಲ್ಲಿ ಮಲಗಿದ್ದಳು. ಆಗ, ಶಿವಬೋಧ್ ವಸಂತ್ (30) ಎಂಬಾತ ಅಜ್ಜಅಜ್ಜಿಯನ್ನು ಬೆದರಿಸಿ ಬೆಳಗಿನ ಜಾವ 1 ಗಂಟೆ ಸುಮಾರಿಗೆ ತಸ್ಮಿಯಾಳನ್ನು ಅಪಹರಿಸಿದ್ದಾನೆ. 10 ಲಕ್ಷ ರು. ಹಣ ನೀಡಬೇಕೆಂದು ಆಗ್ರಹಿಸಿ ಸಂಪರ್ಕಿಸಲು ಫೋನ್ ನಂಬರ್ ಕೊಟ್ಟು ಬಾಲಕಿಯೊಂದಿಗೆ ಪರಾರಿಯಾಗಿದ್ದಾನೆ.
ಫೋನ್ ನಂಬರ್ ಜೊತೆ ಟಿಪ್ಪಣಿಯನ್ನೂ ಚೀಟಿಯಲ್ಲಿ ಬರೆಯಲಾಗಿತ್ತು. ಐದು ಗಂಟೆಯೊಳಗೆ 10 ಲಕ್ಷ ರು. ಹಣ ನೀಡದಿದ್ದರೆ ಬಾಲಕಿಯ ಮೂತ್ರಪಿಂಡಗಳನ್ನು ಮಾರುವುದಾಗಿ ಬೆದರಿಕೆ ಒಡ್ಡಲಾಗಿತ್ತು. ತಸ್ಮಿಯಾಳ ತಂದೆ ಮಲಿಕ್ ಸಾಬ್ ಚಾಂದ್ ಖಾನ್ ಫೋನ್ ಮಾಡಿ, ತಾನು ಬಡವನಾದ್ದರಿಂದ 10 ಲಕ್ಷ ರು. ಸಾಧ್ಯವಿಲ್ಲ, 1 ಲಕ್ಷ ರು. ಕೊಡುವುದಾಗಿ ಮಾತು ಕೊಟ್ಟಿದ್ದರು.
ಶಿವಬೋಧ್ ನೀಡಿದ್ದ ಫೋನ್ ನಂಬರ್ ಟ್ರಾಕ್ ಮಾಡಿದಾಗ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆದರೆ, ಅಷ್ಟರಲ್ಲಾಗಲೆ ಆತ ಅಮಾಯಕ ಮಗುವಿನ ಪ್ರಾಣ ತೆಗೆದುಬಿಟ್ಟಿದ್ದ. ತಾನು ಕೊಲೆ ಮಾಡಿರುವುದಾಗಿ ಆತ ಬಾಯಿಬಿಟ್ಟಿದ್ದಾನೆ. ಅವನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 364ಎ (ಅಪಹರಣ) ಮತ್ತು 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು 500ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಮೂಡಲಗಿ ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದರು. ಹತ್ಯೆ ಮಾಡಿದ ಶಿವಬೋಧನನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಆಗ್ರಹಿಸಿದ್ದರು. ಕೊನೆಗೆ ಉದ್ರಿಕ್ತ ಜನರನ್ನು ಚೆದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.












Click it and Unblock the Notifications