ನಿರಾಣಿ ಬಿಜೆಪಿ ಬಿಡೋಲ್ಲ, ಬಿಡೋಲ್ಲ: ಶೆಟ್ಟರ್- ಜೋಶಿ
ಬೆಂಗಳೂರು, ಏ.2: ಬಿಜೆಪಿ ಸಚಿವ ಮುರುಗೇಶ್ ನಿರಾಣಿ ಅವರು ಪಕ್ಷ ತೊರೆಯುವುದಿಲ್ಲ, ಅವರು ಬಿಜೆಪಿಯಿಂದಲೇ ಸ್ಪರ್ಧಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಏಕಕಂಠದಲ್ಲಿ ತಾಜಾ ಆಗಿ ಮಂಗಳವಾರ ಹೇಳಿದ್ದಾರೆ.
ಕೆಜೆಪಿ ಸೇರುತ್ತಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿರುವ ಜೋಶಿ, ಇಲ್ಲ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ, ಬಿಜೆಪಿಯಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದರು.
ಹುಬ್ಬಳ್ಳಿಯ ತಮ್ಮ 'ಬಾದಾಮಿ' ನಿವಾಸದಲ್ಲಿ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಮಂಗಳವಾರ ಬೆಳಗ್ಗೆ ಸುಮಾರು 1 ಗಂಟೆ ಕಾಲ ಮಾತುಕತೆ ನಡೆಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪಕ್ಷದಲ್ಲೇ ಉಳಿಯುವ ನಿಟ್ಟನಲ್ಲಿ ನಿರಾಣಿ ಮೇಲೆ ತೀವ್ರ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.

ಮುರುಗೇಶ್ ನಿರಾಣಿ ಕೆಜೆಪಿ ಸೇರ್ಪಡೆ ಖಚಿತ ಎನ್ನುತ್ತಿದ್ದವರಿಗೆ ಇದು ಕಹಿ ಗುಳಿಗೆಯಾಗಿದೆಯಾದರೂ ನಿರಾಣಿ ಬಿಜೆಪಿ ತೊರೆದು ಕೆಜೆಪಿ ಸೇರುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿಕಟವರ್ತಿಗಳು ಹೇಳಿದ್ದಾರೆ.
ಅಷ್ಟೇ ಅಲ್ಲ. ಶಾಸಕ ಸಿಸಿ ಪಾಟೀಲ್ ಸಹ ಬಿಜೆಪಿ ಬಿಟ್ಟು ಕೆಜೆಪಿ ಸೇರುವುದು ಖಚಿತ ಎನ್ನುತ್ತಿದ್ದಾರೆ ಯಡಿಯೂರಪ್ಪ ನಿಕಟವರ್ತಿಗಳು. ಮಣಿಪಾಲ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಪಾಟೀಲರನ್ನು ಮೊನ್ನೆ ಭಾನುವಾರ ನಿರಾಣಿ ಮತ್ತು ಯಡಿಯೂರಪ್ಪ ಒಟ್ಟಿಗೇ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ. ಮೂವರೂ ಸುಮಾರು 1 ಗಂಟೆ ಕಾಲ ಪರಸ್ಪರ ಚರ್ಚೆ ನಡೆಸಿದ್ದಾರೆ. ಮಾತುಕತೆಯ ಫಲಶ್ರುತಿಯಾಗಿ ಇಬ್ಬರೂ ನಾಯಕರು ಕೆಜೆಪಿಗೆ ಬರುವುದು ಖಚಿತ ಎನ್ನಲಾಗಿದೆ.
ಆದರೆ ಈ ಮಾತುಕತೆಗಳಿಂದ ಸಾಕಷ್ಟು ಗೊಂದಲಕ್ಕೀಡಾಗಿರುವ ಮುರುಗೇಶ್ ನಿರಾಣಿ ಮಾತ್ರ ಯಾರಿಗೂ ಯಾವುದೇ ಭರವಸೆ ನೀಡದೆ ಜಾರಿಕೊಂಡಿದ್ದಾರೆ. ಸೀದಾ ತಮ್ಮ ಸ್ವಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದು ಅಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರರೊಂದಿಗೆ ಸವಿಸ್ತಾರವಾಗಿ ಚರ್ಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ತಾವು ಬಿಜೆಪಿಯಲ್ಲೇ ಇರುವುದಾಗಿಯೂ ಅವರು ಚುಟುಕಾಗಿ ಹೇಳಿದ್ದಾರೆ.












Click it and Unblock the Notifications