ಬೆಳಗಾವಿ : ಐದು ವರ್ಷದ ಬಾಲಕಿ ಅಪಹರಣ, ಕೊಲೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಲಕ್ಷ್ಮೀನಗರದಿಂದ ಮಾ.31ರ ಭಾನುವಾರ ರಾತ್ರಿ ಐದು ವರ್ಷದ ಬಾಲಕಿ ತಸ್ಮಿಯಾಳನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಮಂಗಳವಾರ ಬೆಳಗ್ಗೆ ಈಕೆಯ ಶವ ತೋಟದಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಶಂಕಿತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮಾ.31ರ ಭಾನುವಾರ ರಾತ್ರಿ ಅಜ್ಜ, ಅಜ್ಜಿಯೊಂದಿಗೆ ಮನೆಯ ಹೊರಗಡೆ ಮಲಗಿದ್ದ ತಸ್ಮಿಯಾಳನ್ನು ದುಷ್ಕರ್ಮಿಗಳು ಅಪಹರಿಸಿ, 10 ಲಕ್ಷ ರೂ. ಹಣ ನೀಡದಿದ್ದರೆ ಬಾಲಕಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಪತ್ರ ಇಟ್ಟು ಪರಾರಿಯಾಗಿದ್ದರು.
ತಾವು ಬಡವರು ಅಷ್ಟು ಹಣ ನೀಡಲು ಸಾಧ್ಯವಿಲ್ಲ. ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಮನವಿ ಮಾಡಿದ್ದ ತಸ್ಮಿಯಾ ಕುಟುಂಬದವರ ಬೇಡಿಕೆಗೆ ಅಪಹರಣಕಾರರು ಒಪ್ಪಿಕೊಂಡಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರಿಗೆ ದೂರು ನೀಡಿದ್ದರಿಂದ ಕೋಪಗೊಂಡ ಅಪಹರಣಕಾರರು ತಸ್ಮಿಯಾಳನ್ನು ಕೊಂದು ಗೋಣಿಚೀಲದಲ್ಲಿ ಶವವನ್ನು ತುಂಬಿ ತೋಟದಲ್ಲಿ ಎಸೆದು ಹೋಗಿದ್ದಾರೆ. ಮನೆಯ ಹತ್ತಿರದ ತೋಟಕ್ಕೆ ಮಂಗಳವಾರ ಬೆಳಗ್ಗೆ ತೆರಳಿದಾಗ ತಸ್ಮಿಯಾಳ ಶವ ಪತ್ತೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಮೊಬೈಲ್ ನಂಬರ್ ಆಧಾರದ ಮೇಲೆ ವಸಂತ್ (26) ಎಂಬ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಜನರ ಪ್ರತಿಭಟನೆ : ಬಾಲಕಿಯ ಶವ ಪತ್ತೆಯಾದ ತಕ್ಷಣ ನೂರಾರು ಜನರು ಮೂಡಲಗಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications