ಬಿಜೆಪಿಗೆ ಒಂದು ಮತ ನೀಡಬೇಡಿ : ಯಡಿಯೂರಪ್ಪ

ಭಟ್ಕಳದಲ್ಲಿ ಆಯೋಜಿಸಿದ್ದ ಕೆಜೆಪಿ ಸಮಾವೇಶದಲ್ಲಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ನಾನು ಅಧಿಕಾರಕ್ಕೆ ತಂದ ಪಕ್ಷದವರು ನನ್ನನ್ನು ಅವಮಾನಿಸಿ ಪಕ್ಷ ಬಿಡುವಂತೆ ಮಾಡಿದರು. ನಯವಂಚಕರಿಂದಾಗಿ ಪಕ್ಷದಿಂದ ಹೊರಬರುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದರು.
ಅಧಿಕಾರದ ಆಸೆಗಾಗಿ ನಾನು ಪ್ರಾದೇಶೀಕ ಪಕ್ಷ ಕಟ್ಟಿಲ್ಲ. ನಾಡಿನ ನೆಲ,ಜಲದ ಸಂರಕ್ಷಣೆಗಾಗಿ ಪಕ್ಷ ಕಟ್ಟಿದ್ದೇನೆ. ಮೂರುವರೆ ವರ್ಷ ಉತ್ತಮ ಜನಪರ ಆಡಳಿತ ನಡೆಸಿದ್ದೇನೆ. ನನ್ನ ಸಾಧನೆಯನ್ನು ಈಗಿನ ಮುಖ್ಯಮಂತ್ರಿಗಳು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ನಾಯಕರಿಲ್ಲದೆ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರು ಒಂದು ಮತವನ್ನು ನೀಡಬೇಡಿ. ಚುನಾವಣೆ ನಂತರ ಪಕ್ಷ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು. ನಾಯಕರ ಪ್ರತಿಷ್ಠೆ, ಒಳ ಜಗಳದಿಂದಾಗಿ ಬಿಜೆಪಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂದು ವಿಶ್ಲೇಷಿಸಿದರು.
ಶಿವಾನಂದ ನಾಯ್ಕು ಅಭ್ಯರ್ಥಿ : ಭಟ್ಕಳ ತಾಲೂಕಿಗೆ ಮಾಜಿ ಸಚಿವ ಶಿವಾನಂದ ನಾಯ್ಕು ಅಭ್ಯರ್ಥಿ. ಹಿಂದೆ ಸಚಿವರಾಗಿದ್ದಾಗ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಬೆಂಬಲ ನೀಡಿ ಗೆಲ್ಲಿಸಿ, ಸಚಿವರಾಗಿ ಅವರನ್ನು ಕ್ಷೇತ್ರಕ್ಕೆ ಮರಳಿ ಕಳುಹಿಸುತ್ತೇನೆ ಎಂದು ಭರವಸೆ ನೀಡಿದರು.
ಯಡಿಯೂರಪ್ಪ ತಪ್ಪು : ಬಿಜೆಪಿ ಮುಳುಗುವ ಹಡಗು ಎಲ್ಲಾ ಸಮಾರಂಭದಲ್ಲೂ ಹೇಳುವ ಯಡಿಯೂರಪ್ಪ ಭಷಣದ ಭರದಲ್ಲಿ ಕೆಜೆಪಿ ಮುಳುಗುವ ಹಡಗು ಎಂದು ಬಿಟ್ಟರು. ತಕ್ಷಣ ತಪ್ಪನ್ನು ಸರಿಪಡಿಸಿಕೊಂಡ ಅವರು, ಮತ್ತುಷ್ಟು ಹೊತ್ತು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದರು.
ಭಟ್ಕಳದ ಸಮಾವೇಶದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಕೆಜೆಪಿ ಅಭ್ಯರ್ಥಿ ಶಿವಾನಂದ ನಾಯ್ಕು ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಕೆಲವು ಮುಖಂಡರು ಈ ಸಂದರ್ಭದಲ್ಲಿ ಕೆಜೆಪಿ ಸೇರಿದರು. ( ಜಲಪಾತಗಳ ಜಿಲ್ಲೆಯಲ್ಲಿ ರಾಜಕೀಯ ಪ್ರವಾಸ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications