ವಿ ಸೋಮಣ್ಣ : ಈಗ ತ್ರಿಶಂಕು ಸ್ವರ್ಗಾಧಿಪತಿ

ಬಿಜೆಪಿ ಬಿಟ್ಟು ಬೇರೆ ಬೇರೆ ಪಕ್ಷ ಕಟ್ಟಿಕೊಂಡಿರುವವರನ್ನು ಮತ್ತೊಮ್ಮೆ ಬಿಜೆಪಿಗೆ ಕರೆ ತರಲು ಚಿಂತನೆ ನಡೆದಿದೆಯಂತೆ. ಮರಳಿ ಬಿಜೆಪಿಗೆ ಬನ್ನಿ ಅಭಿಯಾನದ ಆರಂಭ ವಿ ಸೋಮಣ್ಣ ಅವರಿಂದಲೆ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದೆಂದಿಗೂ ನನ್ನ ನಾಯಕ. ಆದರೆ ಮುಂದಿನ ಚುನಾವಣೆಯಲ್ಲಿ ನಾನು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದರು.
ಸಚಿವ ವಿ.ಸೋಮಣ್ಣ ಅವರ ಕಾಂಗ್ರೆಸ್ ಸೇರ್ಪಡೆಯನ್ನು ಬೆಂಗಳೂರಿನ ಬಹುತೇಕ ಶಾಸಕರು ಸ್ವಾಗತಿಸಿದ್ದರು. ಆದರೆ, ಅವರ ಪ್ರತಿಸ್ಪರ್ಧಿ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರು ಸಹಜವಾಗಿ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ, ಸೋಮಣ್ಣ ಕೆಜೆಪಿಗೆ ಬಂದರೆ ಖಂಡಿತಾ ಟಿಕೆಟ್ ಕೊಡ್ತೀನಿ' ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದ ಸುದ್ದಿ ಹೊರಬಂದಿತು. ಏ. 1 ಅಥವಾ 2ರಂದು ಕೆಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಆ ವೇಳೆಗೆ ಸೋಮಣ್ಣ ಕೆಜೆಪಿ ಸೇರ್ಪಡೆ ನಿಕ್ಕಿಯಾದರೆ ಚಾಮರಾಜನಗರದ ಯಾವುದಾದರೊಂದು (ಹನೂರು?) ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಹರಿದಾಡಿತ್ತು.
ಆದರೆ, ಇದರ ಮುಂದುವರೆದ ಭಾಗದಲ್ಲಿ ನಡೆದಿದ್ದೇ ಬೇರೆ. ಸಚಿವ ಸೋಮಣ್ಣ ಅವರು ಹೆಣ್ಣು ಮಗಳೊಬ್ಬರ ಕಣ್ಣೀರಿಗೆ ಸೋತು ಹನೂರು ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರಂತೆ. ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಜನತೆಗೆ ತಕ್ಕಮಟ್ಟಿಗೆ ಚಿರಪರಿಚಿತರಾಗಿರುವ ಪರಿಮಳ ನಾಗಪ್ಪ ಅವರು ಕಣ್ಣೀರು ಹಾಕಿದ್ದೇ ತಡ ಸೋಮಣ್ಣ ಕರಗಿ 'ಈ ಕ್ಷೇತ್ರ ನೀನೆ ಇಟ್ಟುಕೊಳ್ಳಮ್ಮ' ಎಂದು ಹೇಳಿದ್ದಾರೆ ಎಂಬ ಸುದ್ದಿ ಇದೆ.
ಹನೂರಿನಿಂದ ಕೆಜೆಪಿ ಟಿಕೆಟ್ ಪಡೆದು ಸೋಮಣ್ಣ ಸ್ಪರ್ಧೆ ಎಂಬ ಸುದ್ದಿ ಕೊಳ್ಳೇಗಾಲ, ಚಾಮರಾಜನಗರದಲ್ಲಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ಪರಿಮಳ ನಾಗಪ್ಪ ಅವರು ಸೋಮಣ್ಣ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಗೋಳು ತೋಡಿಕೊಂಡಿದ್ದಾರೆ. ನಂತರ ಬಿಜೆಪಿಯಲ್ಲೇ ಉಳಿಯುವ ಭರವಸೆ ನೀಡಿದ್ದಾಲ್ಲದೆ, ಕೆಜೆಪಿಯಿಂದ ಸ್ಪರ್ಧಿಸುತ್ತಿಲ್ಲ ಎಂಬುದಾಗಿ ಸೋಮಣ್ಣ ಹೇಳಿದರಂತೆ.
ಸೋಮಣ್ಣ ಅವರ ಸ್ಪರ್ಧೆ ಕುರಿತು ಪರಿಮಳ ನಾಗಪ್ಪ ಅವರ ಬೆಂಬಲಿಗರು ಸಭೆ ಸೇರಿ ಮುಂದಿನ ನಡೆ ಬಗ್ಗೆ ಚರ್ಚಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಹನೂರು ಕ್ಷೇತ್ರದಿಂದ ಪರಿಮಳ ನಾಗಪ್ಪ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿದೆ.
ಹನೂರು ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಎಸ್ಪಿ ಪಕ್ಷದ ಪರಿಮಳಾ ನಾಗಪ್ಪ ಅವರು ಅಂದಿನ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ವಿಧ್ಯುಕ್ತವಾಗಿ ಭಾರತೀಯ ಜನತಾ ಪಕ್ಷವನ್ನು ಅ.25, 2008ರಲ್ಲಿ ಸೇರಿದ್ದರು.
ಈಗ ಯಡಿಯೂರಪ್ಪ ನೇತೃತ್ವದ ಕೆಜೆಪಿ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡಿರುವ ಚಾಮರಾಜ ನಗರ ಜಿಲ್ಲೆಯ ಹನೂರು ಕ್ಷೇತ್ರದ ಮಾಜಿ ಶಾಸಕಿ ಪರಿಮಳ ನಾಗಪ್ಪ ಈಗ ಜೆಡಿಎಸ್‌ಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಅವರೇ ಘೊಷಿಸಿದ್ದರೂ ಜೆಡಿಎಸ್ ಟಿಕೆಟ್ ನಿರಾಕರಿಸಿದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಿದ್ಧ ಎಂದಿದ್ದಾರೆ. ಪರಿಮಳಾ ನಾಗಪ್ಪ ಅವರು ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣಗೊಂಡು ಹತ್ಯೆಗೊಳಗಾಗಿದ್ದ ಮಾಜಿ ಸಚಿವ ದಿವಂಗತ ಎಚ್. ನಾಗಪ್ಪ ಅವರ ಪತ್ನಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications