ಲಾಡ್ ಗೆ ಟಿಕೆಟ್ ಸಿಗದಿದ್ದರೆ ಮಂಗಳಮುಖಿ ಆತ್ಮಹತ್ಯೆ

ಕಳೆದ ಚುನಾವಣೆಯಲ್ಲಿ ಅನಿಲ್ ಲಾಡ್ ಕೇವಲ ಒಂದು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಹೀಗಾಗಿ ಈ ಬಾರಿ ಅನಿಲ್ ಲಾಡ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಈ ಬಾರಿ ನೀವು ಅವರ ಕೈ ಬಿಡಬೇಡಿ ಎಂದು ಜನತೆಯ ಮುಂದೆ ಹೇಳಿಕೊಂಡಿದ್ದಲ್ಲದೆ. ಅನಿಲ್ ಲಾಡ್ ಗೆ ಟಿಕೆಟ್ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಮಂಗಳಮುಖಿ ಪರ್ವಿನ್ ಅವರು ಕೆಪಿಸಿಸಿಗೆ ಬೆದರಿಕೆ ಹಾಕಿದ್ದಾರಂತೆ.
ಇತ್ತೀಚೆಗೆ ನಡೆದ ಬಳ್ಳಾರಿ ನಗರಸಭೆ ಚುನಾವಣೆಯಲ್ಲಿ ಪರ್ವಿನ್ ಬಾನು ಅವರು ವಾರ್ಡ್ 4ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಿಸಿದ ಸಾಧನೆ ಮಾಡಿದ್ದಾರೆ. ಪರ್ವೀನ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲು ಅನಿಲ್ ಲಾಡ್ ಅವರೇ ಕಾರಣ. ಅಲ್ಲದೇ, ಲಾಡ್ ಅವರ ಕೃಪಾಶೀರ್ವಾದವೇ ಪರ್ವೀನ್ ಬಾನು ಗೆಲುವಿಗೆ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಬಿಜೆಪಿ ಕೈ ತಪ್ಪುವ ಹಂತದಲ್ಲಿರುವ ಪ್ರತಿಷ್ಠಿತ ಬಳ್ಳಾರಿ ಚುನಾವಣೆ ಕಣವನ್ನು ಮತ್ತೊಮ್ಮೆ ಕಾಂಗ್ರೆಸ್ ವಶಪಡಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡುತ್ತಿದೆ. ಮಾಜಿ ಸಂಸದ ಅನಿಲ್ ಲಾಡ್ ಅಲ್ಲದೆ, ಮಾಜಿ ಮಂತ್ರಿ ಎಂ ದಿವಾಕರ ಬಾಬು, ಮಾಜಿ ಸಂಸದ, ಎಂಎಲ್ ಸಿ ಕೆ.ಸಿ ಕೊಂಡಯ್ಯ ಹಾಗೂ ಗಣಿ ಒಡೆಯ ಇಕ್ಬಾಲ್ ಅಹ್ಮದ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಸಮಾಜ ಸೇವೆಯೇ ನನ್ನ ಗುರಿ, ನನ್ನನ್ನು ಗುರುತಿಸಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್ ಹಾಗೂ ಬಿ ಫಾರಂ ಕೊಡಿಸಿದ ಅನಿಲ್ ಲಾಡ್ ಸಾಹೇಬ್ರಿಗೆ ನಾನು ಋಣಿಯಾಗಿದ್ದೇನೆ. ಎಪಿಎಂಸಿ ಯಾರ್ಡ್ ನಲ್ಲಿ ಚಿಕ್ಕ ಅಂಗಡಿ ನಡೆಸಿಕೊಂಡು ಇದ್ದ ನನ್ನ ಮೇಲೆ ವಯೋವೃದ್ಧ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಇತ್ತು. ಈಗ ನನ್ನ ವಾರ್ಡಿನ ಜನರ ಕಷ್ಟ ಸುಖಗಳಿಗೆ ಆಗಬೇಕಿದೆ ಎಂದು ಪರ್ವೀನ್ ಹೇಳಿದ್ದಾರೆ.
ಕಾರ್ಪೋರೇಟರ್ ಆದ ಮೇಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಂದಿರುವ ಪರ್ವೀನ್ ಅವರ ಮಾತಿಗೆ ಎಐಸಿಸಿ, ಕೆಪಿಸಿಸಿ ಮಣೆ ಹಾಕುವುದೇ ಕಾದು ನೋಡಬೇಕಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications