ವರುಣಾದಿಂದಲೇ ಸ್ಪರ್ಧೆ : ಸಿದ್ದರಾಮಯ್ಯ ಘೋಷಣೆ

ತುಮಕೂರು ಜಿಲ್ಲೆ ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ನಾನು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಎಂದರು.
ಕೆಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪ ಆಪ್ತ ಸಹಾಯಕ ಕಾಪು ಸಿದ್ದಲಿಂಗಸ್ವಾಮಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಕ್ಷೇತ್ರ ಬದಲಾಯಿಸಿ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂಬ ಹೇಳಿಕೆಗಳನ್ನು ಅವರು ತಳ್ಳಿಹಾಕಿದರು.
ಈ ಬಾರಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದಿಲ್ಲ ಎಂಬುದು ವಿರೋಧಿಗಳ ಕುತಂತ್ರದ ಹೇಳಿಕೆ ಎಂದು ಆರೋಪಿಸಿದ ಅವರು, ನನ್ನ ವಿರುದ್ದ ಎಂತಹ ಪ್ರಬಲ ಅಭ್ಯರ್ಥಿಗಳು ಬಂದು ನಿಂತರು, ನಾನು ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಸಿದ್ದರಾಮಯ್ಯ ಕ್ಷೇತ್ರ ಪುನರ್ ವಿಂಗಡನೆ ನಂತರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಈ ಬಾರಿ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ನಿಶ್ಚಯವಾಗಿಲ್ಲ. ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನಡೆಯುವುದಂತೂ ಸ್ಪಷ್ಟವಾಗಿದೆ.
ಕೆಜೆಪಿ ಜೊತೆ ಒಪ್ಪಂದವಿಲ್ಲ : ಕಾಂಗ್ರೆಸ್ ಕೆಜೆಪಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಾ, ಜೆಡಿಎಸ್ ಜೊತೆ ಅವರು ಮಾಡಿಕೊಂಡಿರುವ ಒಳ ಒಪ್ಪಂದವನ್ನು ಮರೆಮಾಚುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಸಿಎಂ ಸಿದ್ದರಾಮಯ್ಯ : ಕೊರಟಗೆರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ತವರು ಕ್ಷೇತ್ರ. ಆ ಕ್ಷೇತ್ರದಲ್ಲಿ ಕಾರ್ಯಕರ್ತರು ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ ಎಂದು ಹಲವಾರು ಬಾರಿ ಘೋಷಣೆ ಕೂಗಿದರು. ಇದರಿಂದ ಪರಮೇಶ್ವರ್ ಅವರಿಗೆ ಕೊಂಚ ಕಸಿವಿಸಿ ಉಂಟಾಯಿತು.
ನಗುತ್ತಲೇ ಪರಿಸ್ಥಿತಿ ನಿಬಾಯಿಸಿದ ಪರಮೇಶ್ವರ್ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಮ್ಮ ಮುಂದಿರುವ ಗುರಿ. ಮುಖ್ಯಮಂತ್ರಿ ಅಭ್ಯರ್ಥಿಯಾರು? ಎಂಬುದು ಗೆಲುವಿನ ನಂತರದ ಲೆಕ್ಕಾಚಾರವಾಗಿದೆ ಎಂದು ಪ್ರತಿಕ್ರಿಯಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications