ನಡೆದಾಡುವ ಸಂತ ಕೃಷ್ಣಶಾಸ್ತ್ರಿಗಳು ಪಂಚಭೂತಗಳಲ್ಲಿ ಲೀನ

ಶನಿವಾರ ಬೆಳಗ್ಗೆ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ನಿಧನರಾದರು. 98 ವರ್ಷ ವಯಸ್ಸಾಗಿದ್ದರೂ ಸದಾ ಚಟುವಟಿಕೆಯಿಂದ ಇರುತ್ತಿದ್ದ ಕೃಷ್ಣಶಾಸ್ತಿಗಳ ನಿಷ್ಕಲ್ಮಷ ನಗು ಎಲ್ಲರನ್ನು ಸೆಳೆಯುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಚಳ್ಳಕೆರೆ ಪುರಸಭೆ ಕಚೇರಿ ಬಳಿ ಶನಿವಾರ ಸಂಜೆ ಕೆಲ ಸಮಯ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಬೆಳಗೆರೆಗೆ ಕೊಂಡೊಯ್ಯಲಾಗಿದ್ದು, ಭಾನುವಾರ ಬೆಳಗ್ಗೆ 11ಕ್ಕೆ ಅವರ ತೋಟದಲ್ಲಿ ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಬೆಳೆಗೆರೆ ಕೃಷ್ಣ ಶಾಸ್ತಿಗಳ 'ಯೇಗ್ದಾಗೆಲ್ಲಾ ಐತೆ' ಎಂಬ ಕೃತಿ ಜನಪ್ರಿಯತೆ ಪಡೆದುಕೊಂಡಿತ್ತು. ಮುಕೂಂದುರು ಸ್ವಾಮೀಜಿಗಳ ಜೊತೆಗಿನ ಒಡನಾಟವನ್ನು ಅವರ ಪವಾಡ, ಸಂದೇಶವನ್ನು ಎಲ್ಲರಿಗೂ ಈ ಪುಸ್ತಕ ಮೂಲಕ ತಲುಪಿಸಿದ್ದರು.
22.05.1918ರಂದು ಜನಿಸಿದ ಕೃಷ್ಣಶಾಸ್ತ್ರಿಗಳು ಶಿಕ್ಷಕರಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಶಾಲೆಗಳಲ್ಲಿ ವೃತ್ತಿ ಮಾಡಿದ್ದಲ್ಲದೆ, ಶಾಲೆಗಳನ್ನು ಕಟ್ಟಿ ಬೆಳೆಸಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳೆಗೆರೆ ಗ್ರಾಮದಲ್ಲಿ ಶ್ರೀಶಾರದಾ ಮಂದಿರ ಎಜುಕೇಷನ್ ಇನ್ಸ್ ಸ್ಟಿಟ್ಯೂಟ್ ಸ್ಥಾಪಿಸಿದರು. ನಾಡಿನ ಮಾದರಿ ಶಾಲೆಗಳಲ್ಲಿ ಇದು ಒಂದಾಗಿದೆ.
2004ರಲ್ಲಿ ಕೃಷ್ಣಶಾಸ್ತ್ರಿಗಳ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅವರಿಗೆ ಆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಕೃಷ್ಣಶಾಸ್ತಿಗಳು 29ರ ಹರೆಯದಲ್ಲಿದ್ದಾಗ ಒಂದೇ ದಿನ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡರು. ಅನೇಕ ಹಿತೈಷಿಗಳು ಎರಡನೇ ಮದುವೆಯಾಗುವಂತೆ ಒತ್ತಾಯಿಸಿದರೂ ಜಗ್ಗಲಿಲ್ಲ. ಜೀವನ ಪ್ರೀತಿ ಬೆಳೆಸಿಕೊಂಡು ಗ್ರಾಮೀಣ ಭಾಗದ ಮಕ್ಕಳ ಆಶಾಕಿರಣವಾದರು.
ಹತ್ತು ಹಲವು ಕನ್ನಡ ಸಾಹಿತಿಗಳ ಜೊತೆಗಿನ ಒಡನಾಟವನ್ನು ಸುಂದರ ಕೃತಿಯಾಗಿ ನೀಡಿದರು. ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳೆಗೆರೆ ಅವರ ಸೋದರ ಮಾವನಾದರೂ ಯಾವುದೇ ಪ್ರಭಾವ, ಪ್ರಲೋಭನೆಗೆ ಒಳಗಾಗದೆ ಸರಳ ಜೀವನ ನಡೆಸಿದ ಗಾಂಧಿವಾದಿಯಾಗಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications