ಬಳ್ಳಾರಿಯಲ್ಲಿ ರಾಮುಲು ಬಟ್ಟೆ ಹರಿದು ಬಂಧಿಸಿದ ಪೊಲೀಸರು

ಬಳ್ಳಾರಿಯ ರಾಯಲ್ ಸರ್ಕಲ್ ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಶ್ರೀರಾಮುಲು ಅವರನ್ನು ಹಿಡಿದು ಎಳೆದಾಡಿದ ಪೊಲೀಸರು ಅವರ ಅಂಗಿ ಹರಿದು ಹೋಗುವಂತೆ ಎಳೆದುಕೊಂಡು ಹೋಗಿ ಪೊಲೀಸ್ ವ್ಯಾನಿಗೆ ಹತ್ತಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಬಿಎಸ್ಆರ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಳ್ಳಾರಿ ನಗರದ ಗಾಂಧಿಭವನದ ಬಳಿಯ ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಆದ್ದರಿಂದ ವ್ಯಾಪಾರಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಸಜ್ಜಾಗಿತ್ತು. ಇದನ್ನು ವಿರೋಧಿಸಿ ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಶ್ರೀರಾಮುಲು ವಿವಿಧ ಸಂಘಟನೆಗಳ ಜೊತೆ ಸೇರಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಗಿದ್ದೇನು : ಶನಿವಾರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ ಅವರಿಗೆ ಅಂಗಡಿಗಳನ್ನು ತೆರವುಗೊಳಿಸದಂತೆ ಮನವಿ ಪತ್ರ ಸಲ್ಲಿಸಲು ಕನಕದುರ್ಗಮ್ಮ ದೇವಸ್ಥಾನದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ಆರಂಭಿಸಿದ್ದರು. ಆದರೆ, ರಾಯಲ್ ಸರ್ಕಲ್ ಬಳಿ ಪ್ರತಿಭಟನಾ ಮೆರವಣಿಗೆ ಬಂದ ತಕ್ಷಣ ಪೊಲೀಸರು ಅವರನ್ನು ತಡೆದರು.
ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ವ್ಯಾಪಾರಸ್ಥರು ರಾಯಲ್ ಸರ್ಕಲ್ ನಲ್ಲಿಯೇ ಪ್ರತಿಭಟನೆ ಮುಂದುವರೆಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಜರಾಗಬೇಕೆಂದು ಘೋಷಣೆ ಕೂಗಲಾರಂಭಿಸಿದರು. ತಕ್ಷಣ ಪರಿಸ್ಥಿತಿ ಹತೋಟಿದ ತರುವ ಉದ್ದೇಶದಿಂದ ಪೊಲೀಸರು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶ್ರೀರಾಮುಲು ಅವರನ್ನು ಬಂಧಿಸಲು ಮುಂದಾದರು.
ಪೊಲೀಸರು ಶ್ರೀರಾಮುಲು ಅವರನ್ನು ಸುತ್ತುವರೆದಾಗ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು. ಇದರಿಂದ ತಕ್ಷಣ ಪೊಲೀಸರು ಶ್ರೀರಾಮುಲು ಅವರನ್ನು ವ್ಯಾನಿನ ಬಳಿಗೆ ಎಳೆದುಕೊಂಡು ಹೋದರು. ಈ ಸಂದರ್ಭದಲ್ಲಿ ಅವರ ಜುಬ್ಬಾ ತೋಳಿನ ಭಾಗದಲ್ಲಿ ಸಂಪೂರ್ಣ ಹರಿದು ಹೋಯಿತು. ವ್ಯಾನಿಗೆ ಹತ್ತಲು ನಿರಾಕರಿಸಿದ ರಾಮುಲು ಮತ್ತು ಇತರರು ರಾಯಲ್ ಸರ್ಕಲ್ ನಲ್ಲಿಯೇ ಪ್ರತಿಭಟನೆ ಮುಂದುವರೆಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications