ಚುನಾವಣಾ ಆಯೋಗದ ಮಹತ್ವದ ಸಭೆ

ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪಕ್ರಟಗೊಳ್ಳಲು ಅಂತಿಮ ಹಂತದ ಸಿದ್ಧತೆಗಳು ಪ್ರಾರಂಭವಾಗಿದ್ದು, ಕೇಂದ್ರ ಚುನಾವಣಾ ಆಯೋಗ ಇಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಜೊತೆ ಮಹತ್ವದ ಸಭೆ ನಡೆಸಲಿದೆ. ಸಭೆಯ ನಂತರ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ.
ಹಿಂದಿನ ಸುದ್ದಿ : ಬುಧವಾರ ಮಧ್ಯಾಹ್ನ 12.30ಕ್ಕೆ ಕೇಂದ್ರ ಗೃಹ ಕಾರ್ಯದರ್ಶಿ ಜೊತೆ ಸಭೆ ನಡೆಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಸಮಯಾವಕಾಶ ನೀಡಲಾಗಿದೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ನೇತೃತ್ವದಲ್ಲಿ ಆಯೋಗದ ಅಧಿಕಾರಿಗಳು ಗೃಹ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.
ಚುನಾವಣೆ ನಡೆಸುವಾಗ ಕೇಂದ್ರಿಯ ಪಡೆಗಳ ಲಭ್ಯತೆಗಳ ಬಗ್ಗೆ ಗೃಹ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಯಲಿದೆ. ಆಯೋಗವು ಅಂತಿಮಗೊಳಿಸಿರುವ ದಿನಾಂಕಗಳಂದು ಕೇಂದ್ರಿಯ ಪಡೆಗಳು ಲಭ್ಯವಿಲ್ಲದಿದ್ದರೆ, ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಸಲು ಆಯೋಗ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಗೃಹ ಕಾರ್ಯದರ್ಶಿಗಳ ಸಭೆ ಬಳಿಕ ಚುನಾವಣಾ ಆಯೋಗ ಮತ್ತೊಮ್ಮೆ ಸಭೆ ನಡೆಸಲಿದ್ದು, ದಿನಾಂಕಗಳನ್ನು ಅಂತಿಮಗೊಳಿಸಿಕೊಂಡು ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ ಇಲ್ಲವೇ ಈ ವಾರದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗುವುದು ಬಹುತೇಕ ಖಚಿತವಾಗಿದೆ.
ಏಪ್ರಿಲ್ ನಲ್ಲಿ ಚುನಾವಣೆ : ಇದುವರೆಗೂ ಮೇ ತಿಂಗಳಿನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಚುನಾವಣಾ ಆಯೋಗ ಏಪ್ರಿಲ್ 23ರಿಂದ 30ರೊಳಗೆ ಚುನಾವಣೆ ಪ್ರಕ್ರಿಯೆಗಳನ್ನು ಮುಗಿಸಲು ಆಲೋಚಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರ ತರಾತುರಿಯಲ್ಲಿ ಸಚಿವ ಸಂಪುಟ ಸಭೆ ನಡೆಸುತ್ತಿರುವುದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿರುವುದು ಮುಂತಾದ ಬೆಳವಣಿಗೆಗಳನ್ನು ಗಮನಿಸಿದರೆ ಏಪ್ರಿಲ್ ನಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ಕರ್ನಾಟಕದ ವಿವಿಧ ರಾಜಕೀಯ ಪಕ್ಷಗಳು ವಿಧಾನಸಭೆ ಚುಣಾವಣೆಗೆ ಅಂತಿಮ ಸಿದ್ಧತೆ ಪ್ರಾರಂಭಿಸಿವೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಕಸರತ್ತು ಪ್ರಾರಂಭಿಸಿವೆ. ಆಡಳಿತಾರೂಢ ಬಿಜೆಪಿ ನೂತನ ಯೋಜನೆಗಳನ್ನು ಪ್ರಕಟಿಸುತ್ತಾ, ಮತದಾರರನ್ನು ಒಲೈಸಲು ಪ್ರಯತ್ನ ನಡೆಸಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications