ಮಾ.23ಕ್ಕೆ ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ

ಮಂಗಳವಾರ ನಗರದ ಗೋಲ್ಡನ್ ಪಾಮ್ ರೆಸಾರ್ಟ್ ನಲ್ಲಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಂಸದೀಯ ಮಂಡಳಿ ಸಭೆ ನಡೆಸಿದ ಪಕ್ಷದ ನಾಯಕರು ಮಾ.23ರಂದು 150 ಕ್ಷೇತ್ರಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಲ್ಪಸಂಖ್ಯಾತರು, ಮಹಿಳೆಯರು, ಹಿಂದುಳಿದವರಿಗೆ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಹೈ ಕಮಾಂಡ್ ಸಂಸ್ಕೃತಿ ಪಕ್ಷದಲ್ಲಿ ಇಲ್ಲ. ಸ್ಥಳೀಯ ನಾಯಕರೇ ಹೈ ಕಮಾಂಡ್. ಆಪರೇಷನ್ ಕಮಲಕ್ಕೆ ಒಳಗಾದವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಜನರ ಮುಂದೆ ಅಭ್ಯರ್ಥಿಗಳ ಘೋಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ. ಎಲ್ಲಾ ಅಭ್ಯರ್ಥಿಗಳ ಹೆಸರು, ವಿದ್ಯಾರ್ಹತೆ, ಆಸ್ತಿ ಮುಂತಾದ ವಿವರಗಳನ್ನು ಪಕ್ಷದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದರು. ಆಯ್ಕೆ ಮಾಡಿದ ಅಭ್ಯರ್ಥಿಗಳು ಸಾರ್ವಜನಿಕರ ಸಮ್ಮಖದಲ್ಲಿ ನಾಗರೀಕ ನಡವಳಿಕೆ, ಪಕ್ಷದ ಬದ್ಧೆತೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
ಜನರನ್ನು ಕರೆತನ್ನಿ : ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಕಡೆಯಿಂದ ಕನಿಷ್ಠ 2000 ಜನರನ್ನು ಕರೆತಂದು ಶಕ್ತಿ ಪ್ರದರ್ಶಿಸಬೇಕು. ಇದಕ್ಕಾಗಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗುವುದು. ಅಭ್ಯರ್ಥಿಗಳು ಕರೆತಂದ ಜನರ ಮುಂದೆಯೇ ಅವರ ಹೆಸರನ್ನು ಸೂಚಿಸಿ ಟಿಕೆಟ್ ನೀಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
ಸಮಾವೇಶದಲ್ಲಿ ಜನರು ಆಯ್ಕೆ ಮಾಡಿದ ಅಭ್ಯರ್ಥಿಗಳು ಪಕ್ಷದ ಟಿಕೆಟ್ ಪಡೆಯುವ ಅಂತಿಮ ಅಭ್ಯರ್ಥಿಗಳಾಗುತ್ತಾರೆ. ಮಾ.23ರಂದು 150 ಜನರ ಮೊದಲ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಸಂಸದೀಯ ಮಂಡಳಿ ಸಭೆಯಲ್ಲಿ ಮಂಡಳಿ ಅಧ್ಯಕ್ಷ ಬಸವರಾಜ ಹೊರಟ್ಟಿ, ಪಿಜಿಆರ್ ಸಿಂಧ್ಯಾ, ಬಂಡೆಪ್ಪ ಕಾಶೆಂಪುರ, ಬಸವನಗೌಡ ಪಾಟೀಲ್ ಯತ್ನಾಳ್, ಜಮೀರ್ ಅಹಮದ್ ಖಾನ್ ಮುಂತಾದವರು ಭಾಗವಹಿಸಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications