ಕರುಣಾ ಸ್ಥಿತಿ ದಾರುಣ, ಡಿಎಂಕೆಗೆ ಜಯಾ ಭಯ

ಡಿಎಂಕೆ ನಿರ್ಧಾರವನ್ನು ಬರೀ 'ಡ್ರಾಮಾ' ಪೋಸ್ ಕೊಟ್ಟಿದ್ದಾರೆ ಅಷ್ಟೇ. ನನಗಂತೂ ಇದು ಅಚ್ಚರಿಯ ಬೆಳವಣಿಗೆ ಎನಿಸುವುದಿಲ್ಲ. ಎಐಎಡಿಎಂಕೆ ಮುಖ್ಯಸ್ಥೆ ಜೆ ಜಯಲಲಿತಾ ಅವರ ಭಯ ಡಿಎಂಕೆಯನ್ನು ಕಾಡುತ್ತಿದೆ ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.
ಬೇಕಾದ್ರೆ ನೋಡ್ತಾ ಇರಿ ಇನ್ನು ಒಂದು ತಿಂಗಳು ಅಥವಾ ಒಂದೇ ವಾರದಲ್ಲಿ ಯುಪಿಎ ಹತ್ತಿರ ಡಿಎಂಕೆ ಮತ್ತೆ ಕಾಣಿಸಿಕೊಳ್ಳಲಿದೆ. ಜಯಲಲಿತಾರಿಗಿಂತ ರಾಜಕೀಯವಾಗಿ ಸಾಕಷ್ಟು ಹಿಂದೆ ಬೀಳುವ ಭೀತಿಯನ್ನು ಕರುಣಾನಿಧಿ ಎದುರಿಸುತ್ತಿದ್ದಾರೆ ಎಂದು ಸ್ವಾಮಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಡಿಎಂಕೆ ಪಕ್ಷಕ್ಕೆ ಸೇರಿದ 18 ಮಂದಿ ಸಂಸದರಿದ್ದಾರೆ, ಇವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಂಭವವಿದೆ.
18 ಜನ ಡಿಎಂಕೆ ಸಂಸದರನ್ನು ಹೊರಕಿಟ್ಟರೆ ಯುಪಿಎ ಸರ್ಕಾರದ ಸದಸ್ಯರ ಸಂಖ್ಯೆ 295 ರಿಂದ 277ಕ್ಕೆ ಕುಸಿಯಲಿದೆ. ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಡುವ ಸಾಧ್ಯತೆಯನ್ನೂ ಕರುಣಾನಿಧಿ ತಳ್ಳಿ ಹಾಕಿದ್ದಾರೆ.
ಆದರೆ, ಯುಪಿಎ ಗೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಗಳ ಬಾಹ್ಯ ಬೆಂಬಲ ಸಿಕ್ಕಿದೆ. ಎಸ್ ಪಿ 22 ಹಾಗು ಬಿಎಸ್ ಪಿ 21 ಸದಸ್ಯರನ್ನು ಹೊಂದಿದ್ದು ಸರ್ಕಾರ ಭದ್ರವಾಗಿ ನಿಲ್ಲಲಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯಲ್ಲಿ ಶ್ರೀಲಂಕಾದಲ್ಲಿ ನಡೆದ ತಮಿಳರ ಹತ್ಯೆ ಖಂಡಿಸಿ, ಜಿನೀವಾದಲ್ಲಿ ಮಾರ್ಚ್ 22ರಂದು ನಿರ್ಣಯ ಕೈಗೊಳ್ಳಲಿದೆ.
ಈ ನಿರ್ಣಯದ ಪರವಾಗಿ ಮತ ಹಾಕುವಂತೆ ಡಿಎಂಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಕೇಂದ್ರ ಸರ್ಕಾರ ನಿರ್ಣಯ ಪರ ಅಥವಾ ವಿರುದ್ಧವಾಗಿ ಮತದಾನ ಮಾಡುವ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಆದರೆ, ಶ್ರೀಲಂಕಾ ವಿರುದ್ದ ಮತ ಹಾಕುವ ಸಾಧ್ಯತೆ ಹೆಚ್ಚಿದೆ. ತಮಿಳರ ಮೇಲಿನ ದಬ್ಬಾಳಿಕೆ ಖಂಡಿಸಿ ಡಿಎಂಕೆ ಈ ನಿರ್ಣಯ ಕೈಗೊಂಡಿದೆ.












Click it and Unblock the Notifications