ಪರಿಚಿತರಿಂದಲೇ ಚಾಮರಾಜಪೇಟೆ ಗೃಹಿಣಿಯ ಕೊಲೆ?

ನಂಜಪ್ಪ ಬ್ಲಾಕ್ ನ ನಿವಾಸಿಯಾಗಿದ್ದ ಮಾನಸ (27) ಕೊಲೆಯಾದ ಗೃಹಿಣಿ. ಶಾಲೆಗೆ ತೆರಳಿದ್ದ ಮಾನಸ ಅವರ ಮಗ ಅದಿತ್ ಸಂಜೆ 4.30ಕ್ಕೆ ಮನೆಗೆ ಬಂದಾಗ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಪತಿ ಮತ್ತು ಮಗ ಹೊರ ಹೋಗಿರುವಾದ ಮನೆಗೆ ಬಂದ ದುಷ್ಕರ್ಮಿಗಳು ಉಸಿರು ಗಟ್ಟಿಸಿ ಮಾನಸ ಅವರನ್ನು ಕೊಂದು ಪರಾರಿಯಾಗಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುದರಿಂದ ದರೋಡೆ ಕೋರರು ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೆಂಪೇಗೌಡ ನಗರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಿಚಿತರು ಬಂದರೆ ಬಾಗಿಲು ತೆರೆಯುವುದಿಲ್ಲ, ಆದ್ದರಿಂದ ಮಾನಸ ಅವರ ಪರಿಚಿತರು ಈ ಕೃತ್ಯದಲ್ಲಿ ಭಾಗಿಯಾಗಿರಬಹು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಆರು ವರ್ಷಗಳ ಹಿಂದೆ ಶಿಢ್ಲಘಟ್ಟ ತಾಲೂಕಿನ ನಾಗರಾಜ್ ಎಂಬುವವರನ್ನು ವಿವಾಹವಾಗಿದ್ದ ಮಾನಸ ಅವರಿಗೆ ನಾಲ್ಕು ವರ್ಷದ ಅದಿತ್ ಎಂಬ ಗಂಡು ಮಗುವಿದೆ. ಮಾನಸ ಅವರ ಪತಿ ನಾಗರಾಜ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ಕೆಲಸಕ್ಕೆ, ಮಗ ಶಾಲೆಗೆ ತೆರಳಿದ ನಂತರ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಮಧ್ಯಾಹ್ನ 12.30 ರಿಂದ 1 ಗಂಟೆಯವೊಳಗೆ ಕೊಲೆಯಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿನ ಟಿಫಾಯಿ ಮೇಲೆ ಟೀ ಕುಡಿದ ಲೋಟಗಳು ಕಂಡು ಬಂದಿದ್ದು ಪರಿಚಿರದ್ದೆ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ. ಸಂಜೆ 4.30ಕ್ಕೆ ಶಾಲೆಯಿಂದ ಮನೆಗೆ ಬಂದ ಮಗ ಅದಿತ್ ತಾಯಿಯನ್ನು ಕರೆದಿದ್ದಾನೆ. ಯಾವುದೇ ಪ್ರತಿಕ್ರಿಯೆ ಬರದೆ ಇದ್ದಾಗ, ಮನೆಯನ್ನು ಹುಡುಕಾಡಿದ್ದಾನೆ.
ಬೆಡ್ ರೂಂನಲ್ಲಿ ತಾಯಿ ಮಲಗಿರುವುದು ಕಂಡು, ಅವರನ್ನು ಎಬ್ಬಿಸಲು ಹೋದಾಗ ತಾಯಿ ಮಾತನಾಡಿಲ್ಲ. ಇದರಿಂದ ಗಾಬರಿಗೊಂಡು ಜೋರಾಗಿ ಚೀರಿ ಕೊಂಡಿದ್ದಾನೆ. ತಕ್ಷಣ ಆಗಮಿಸಿದ ಮನೆಯ ಮಾಲೀಕರು, ಮಾನಸ ಸಾವನ್ನಪ್ಪಿರುವುದು ತಿಳಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಇದು ಪರಿಚಿತರ ಕೃತ್ಯವಿರಬಹುದು ಎಂದು ಶಂಕಿಸಿರುವ ದಕ್ಷಿಣ ವಿಭಾಗ ಡಿಸಿಪಿ ರೇವಣ್ಣ, ಪ್ರಾಥಮಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications