ಮೈಲಾಪುರ ಮಲ್ಲಯ್ಯನ ಮೂರ್ತಿ ದೋಚಿದ ಖದೀಮರು

ಸದಾ ಮೈತುಂಬ ಬಗೆಬಗೆಯ ಅಲಂಕಾರ ಮಾಡಿಕೊಂಡು ಕಂಗೊಳಿಸುತ್ತಿದ್ದ ಶ್ರೀಮೈಲಾಪುರ ಮಲ್ಲಯ್ಯ ಇಂದು ಅಕ್ಷರಶಃ ಭಣಗುಡುತ್ತಿತ್ತು. ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಸುಕ್ಷೇತ್ರ ಮಲ್ಲಯ್ಯ ದೇವಸ್ಥಾನದ ಗರ್ಭಗುಡಿಯ ಮುಖ್ಯದ್ವಾರವನ್ನು ಒಡೆದು, ಒಳನುಗ್ಗಿದ ಇಬ್ಬರು ಕಳ್ಳರು 2 ಕೆಜಿ ಬೆಳ್ಳಿಯ ಮಲ್ಲಯ್ಯನ ಮೂರ್ತಿ, 1 ಕೆ.ಜಿ ಛತ್ರಿ, 250 ಗ್ರಾಂ ಕಂಠಾಭರಣ, 30 ಗ್ರಾಂ ಸಣ್ಣ ಪ್ರಮಾಣದ ಛತ್ರಿ ಸೇರಿದಂತೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಶುಕ್ರವಾರ ಬೆಳಗಿನ ಜಾವ 1.20ರ ಸುಮಾರಿಗೆ ಗರ್ಭಗುಡಿಯ ಮುಖ್ಯದ್ವಾರದ ಕೀಲಿಯನ್ನು ಮುರಿದು ಒಳನುಗ್ಗಿದ ಇಬ್ಬರು ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿದ್ದ ಯಾದಗಿರಿ ಗ್ರಾಮಂತರ ಪೊಲೀಸರು ಸ್ಥಳವನ್ನು ನೋಡಿ, ದೇವಸ್ಥಾನದ ಸುತ್ತಮುತ್ತಾ ಪರಿಶೀಲಿಸುತ್ತಿದ್ದಾಗ, ದೇವಸ್ಥಾನದ ಹಿಂಭಾಗದ ಬಂಡೆಗಲ್ಲಿನ ಮಧ್ಯದಲ್ಲಿ ಕಬ್ಬಿಣದ ಗಲ್ಲಾಪೆಟ್ಟಿಗೆಗಳು ಹಾಗೂ ಅದೇ ಸ್ಥಳದಲ್ಲಿ ಸಿಗರೇಟ್ ಪ್ಯಾಕ್‌ಗಳು ಸಿಕ್ಕಿವೆ. ಸ್ಥಳೀಯರು ಹೇಳೋ ಪ್ರಕಾರ ನಿನ್ನೆ ರಾತ್ರಿ ಇಬ್ಬರು ಅಪರಿಚಿತರು ದೇವಸ್ಥಾನಕ್ಕೆ ಬಂದಿದ್ದರು, ಅವರೇ ಕಳ್ಳತನ ಮಾಡಿರುವ ಶಂಕೆ ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ.
ಪ್ರತಿ ವರ್ಷ ಸಂಕ್ರಮಣದಂದು ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ, ಈ ಘಟನೆಯಿಂದ ಮತ್ತಷ್ಟು ನೋವುಂಟಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೇವರಾಗಿದ್ದ ಮಲ್ಲಯ್ಯನ ಮೂರ್ತಿ ದೋಚಿದ ಕಳ್ಳರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕೆನ್ನೊದು ಭಕ್ತರ ಆಗ್ರಹವಾಗಿದೆ. ಆದ್ರೆ ದೇವಸ್ಥಾನದಲ್ಲಿ ಇಷ್ಟೊಂದು ರಾಜರೋಷವಾಗಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ದೇವಸ್ಥಾನದ ಭದ್ರತೆಯ ಬಗ್ಗೆ ಅನುಮಾನವನ್ನೂ ಮಾಡಿಸಿದೆ.












Click it and Unblock the Notifications