ಕೆಜೆಪಿ ಸೇರಲು ಸಿದ್ದ ಆದರೆ ಶೋಭಾಗೆ ಬ್ರೇಕ್ ಹಾಕಿ

ಏನಪ್ಪಾ ಅಂಥಾ ಕಂಡೀಷನ್ಸು, ಏನು ಮುಂದಿನ ಚುನಾವಣೆಗೆ ಟಿಕೆಟ್ ಕೇಳಿದ್ದಾರಾ? ಅಥವಾ ದುಡ್ಡು ಕಾಸು ಏನಾದರೂ ಕೇಳಿದ್ದಾರಾ ಅಂತಂದರೆ... ಅಂಥಾದ್ದೇನೂ ಇಲ್ಲ. ನಮ್ದು ಒಂದೇ ಕಂಡೀಷನ್ನು. ಆಯಮ್ಮ ಶೋಭಾರ ಆರ್ಭಟ/ಸರ್ವಾಧಿಕಾರವನ್ನು ವಸಿ ತಡೆಗಟ್ಟಿ ಎಂದು ಪಿಸುಗುಟ್ಟಿದ್ದಾರೆ ಆ ಶಾಸಕ ಮಿತ್ರರು.
ಹೌದು, ಮುಖ್ಯಮಂತ್ರಿ ಯಡಿಯೂರಪ್ಪ ಪರಮಾಪ್ತೆ ಶೋಭಾ ಕರಂದ್ಲಾಜೆ ಅವರ ಬಗ್ಗೆ ಈ ಗುಲ್ಲು ಎದ್ದಿರುವುದು ಇದೇ ಮೊದಲಲ್ಲ. ಅನೇಕಾನೇಕ ಯಡಿಯೂರಪ್ಪ ನಿಷ್ಠಾವಂತ ಹಿರಿಯರೇ ಶೋಭಾ ಬಗ್ಗೆ ವರಾತ ತೆಗೆದು, ಮುಂದೆ ಶೋಭಾರನ್ನು ಸಿಎಂ ಮಾಡಿಬಿಡ್ತಾರೆ ಎಂದು ಅಕ್ಷರಶಃ ಭಯಪಟ್ಟು ಕೆಜೆಪಿ ಸಹವಾಸ ಬೇಡ ಎಂದಿದ್ದರು.
ಮುಂದೆ ಚಾಮರಾಜನಗರ, ಮೈಸೂರು, ಮಂಡ್ಯ ಭಾಗಗಳಲ್ಲೂ ಶೋಭಾ ತಮ್ಮ 'ಶಕ್ತಿ' ಪ್ರದರ್ಶನಕ್ಕೆ ಇಟ್ಟಾಗ ಸಿದ್ಲಿಂಗು ಸೇರಿದಂತೆ ಅನೇಕ ಹಿರಿಯರು ಸಿಡಿದೆದ್ದಿದ್ದರು. ತಕ್ಷಣ ಓಡೋಡಿ ಹೋದ ಯಡಿಯೂರಪ್ಪ ಅವರನ್ನೆಲ್ಲ ಸಮಧಾನಪಡಿಸಿದ್ದರು.
ಆದರೂ ಶೋಭಾ ಆರ್ಭಟ ಮುಂದುವರಿದಿದೆ ಎಂದು ಈಗ ಮತ್ತೊಂದಷ್ಟು ಮಂದಿ ಕೆಜೆಪಿಯ ಹಿರಿಯಣ್ಣ ಸಿಎಂ ಉದಾಸಿ ಮುಂದೆ ಅಲವತ್ತುಕೊಂಡಿದ್ದಾರೆ.
ತಮ್ಮ ಪಟ್ಟ ಶಿಷ್ಯರೇ ಪಕ್ಷ ಸೇರಲು ಮುಂದಾಗುತ್ತಿಲ್ಲ ಎಂದು ಯಡಿಯೂರಪ್ಪ ಕೈಚೆಲ್ಲಿ ಕುಳಿತಿದ್ದಾಗ ಆ ಪೈಕಿ ಕೆಲವರು ಕೊನೆಯ ಹಂತದಲ್ಲಿ ಮತ್ತೆ ಯಡಿಯೂರಪ್ಪ ಅವರತ್ತ ಒಲವು ತೋರಿ, ಉದಾಸಿ ಮಧ್ಯಸ್ಥಿಕೆಯಲ್ಲಿ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅವರದೆಲ್ಲಾ ಅದೊಂದೇ ಕಂಡೀಷನ್ನು, ಶೋಭಾರನ್ನು ನಿಯಂತ್ರಿಸಿ ಎಂಬುದು.
ಕಳೆದೈದು ವರ್ಷಗಳಿಂದ ಯಡಿಯೂರಪ್ಪ ಜತೆಗೇ ಬಲವಾಗಿ ಗುರುತಿಸಿಕೊಂಡಿದ್ದು, ಕೆಜೆಪಿ ಸ್ಥಾಪನೆಯ ಹಂತದಲ್ಲಿ ಹಿಂದೆ ಸರಿದಿದ್ದ ಆ ಸಚಿವ-ಶಾಸಕರು ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ನಂತರ ತಮ್ಮ ಪಕ್ಷ ನಿಷ್ಠೆಯನ್ನು ಬದಲಾಯಿಸುವ ಸಂಭವ ದಟ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿ ಅವರು ಗುರುವಾರ ತಡರಾತ್ರಿವರೆಗೂ ಕೆಜೆಪಿಯ ಹಿರಿಯಣ್ಣ ಉದಾಸಿ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಇದೆಲ್ಲದರ ಜತೆಗೆ ಯಡಿಯೂರಪ್ಪ ಇಲ್ಲದ ಬಿಜೆಪಿಯಲ್ಲಿ ಮುಂದುವರಿಯುವುದು ಅವರಿಗೂ ಸುಲಭವಾಗಿ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಸಂಘ ಪರಿವಾರದ ಮೂಲದಿಂದ ಬಂದಿರದ ಮುಖಂಡರಿಗೆ ಬಿಜೆಪಿಯಲ್ಲಿ ಪ್ರಮುಖ ಸ್ಥಾನಮಾನ ಸಿಗುವುದೂ ಕಷ್ಟವಾಗಲಿದೆ. ಅದಕ್ಕಿಂತ ಹೆಚ್ಚಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವೂ ಮಾಯವಾಗಿದೆ. ಇಂಥ ಸಂದರ್ಭದಲ್ಲಿ ಬಿಜೆಪಿಯಲ್ಲೇ ಮುಂದುವರೆಯುವುದರಿಂದ ಆಗುವ ರಾಜಕೀಯ ಲಾಭವಾದರೂ ಏನು ಎಂಬ ಪ್ರಶ್ನೆ ಈ ಸಚಿವ-ಶಾಸಕರನ್ನು ಕಾಡುತ್ತಿದೆ ಎನ್ನಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications