ಕುಮಾರಸ್ವಾಮಿ ನಂ.1 ಮುಖ್ಯಮಂತ್ರಿ : ಸಮೀಕ್ಷೆ ವರದಿ
ಬೆಂಗಳೂರು, ಮಾ.14 : ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು, ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಲೂ ರಾಜ್ಯದ ನಂ.1 ಮುಖ್ಯಮಂತ್ರಿ ಎಂದು ಸಮೀಕ್ಷೆಯ ವರದಿಯೊಂದು ಹೇಳಿದೆ.
ನವದೆಹಲಿ ಮೂಲದ ಖಾಸಗೀ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಶೇ.28.7ರಷ್ಟು ಮತಗಳನ್ನು ಪಡೆದು ಜನಪ್ರಿಯ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೊರಹೊಮ್ಮಿದ್ದಾರೆ. ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ಸ್ಥಾನ ಪಡೆದಿದ್ದಾರೆ.

2012ರ ಡಿಸೆಂಬರ್ 6ರಿಂದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವವರೆಗೂ ರಾಜ್ಯದ 224 ಕ್ಷೇತ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಫಲಿತಾಂಶ ಹೊರಬಂದಿದೆ. ಡಿನೋಟಿಫಿಕೇಷನ್ ಮುಂತಾದ ಹಗರಣಗಳಿಗೆ ಸಿಲುಕಿ ಜೈಲುವಾಸ ಅನುಭವಿಸಿ ಬಂದ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಕೇವಲ 22.9 ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.
ಮಾಜಿ ವಿದೇಶಾಂಗ ಸಚಿವ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೇವಲ 16.9ರಷ್ಟು ಮತಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ 11.6 ರಷ್ಟು ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಕೇವಲ 4.2ರಷ್ಟು ಮತಗಳನ್ನು ಮಾತ್ರ ಪಡೆದು ಐದನೇ ಸ್ಥಾನ ಪಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮುಖ್ಯಮಂತ್ರಿಯಾಗಬಹುದೇ ಎಂಬುದಕ್ಕೆ ಶೇ.2.4ರಷ್ಟು ಜನರು ಮಾತ್ರ ಓಕೆ ಎಂದಿದ್ದಾರೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಸುಮಾರು 5 ಸಾವಿರ ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಲಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆಸಿದ ಜನತಾದರ್ಶನ, ಗ್ರಾಮವಾಸ್ತವ್ಯ ಮುಂತಾದ ಕಾರ್ಯಕ್ರಮಗಳಿಗೆ ಜನರು ಬೆಂಬಲ ನೀಡಿದ್ದಾರೆ.
ಯಡಿಯೂರಪ್ಪ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಸಜ್ಜನ ಪಕ್ಷಪಾತ ಮುಂತಾದ ಬೆಳವಣಿಗೆಗಳ ಬಗ್ಗೆ ಜನರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ತನ್ನ ಸಚಿವ ಸಂಪುಟದ ಮೇಲೆ ಹಿಡಿತವ ವಿಲ್ಲದ ಮುಖ್ಯಮಂತ್ರಿ ಯಾರು ? ಎಂಬ ಪ್ರಶ್ನೆಗೆ ಜನರು ಯಡಿಯೂರಪ್ಪ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications