ಮಲ್ಲೇಶ್ವರಂ ಮಾರುಕಟ್ಟೆ ಸ್ಥಳಾಂತರಕ್ಕೆ ತಡೆಯಾಜ್ಞೆ

ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಮಾರುಕಟ್ಟೆಯ ವ್ಯಾಪಾರಿಗಳಾದ ಶಿವಣ್ಣ ಮತ್ತಿತರರು, ಮಾರುಕಟ್ಟೆಯಲ್ಲಿ ಒಟ್ಟು 247 ಅಂಗಡಿಗಳಿವೆ. 32 ಅಂಗಡಿಗಳಿಗೆ ಮಾತ್ರ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿ ಎರಡು ದಿನದಲ್ಲಿ ಮಳಿಗೆ ತೆರವುಗೊಳಿಸುವಂತೆ ಬಿಬಿಎಂಪಿ ನೋಟಿಸ್ ನೀಡಿದೆ.
ವಿಧಾನಸಭೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಮಾಲ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಬೇಕು ಎಂದು ಬಿಬಿಎಂಪಿ ಆತುರದ ನಿರ್ಧಾರ ಕೈಗೊಳ್ಳುತ್ತಿದೆ. ಸಂಪಿಗೆ ರಸ್ತೆಯಲ್ಲಿ ಈಗಾಗಲೇ ಅಧಿಕ ವಾಹನ ದಟ್ಟಣೆ ಇದ್ದು, ಇಲ್ಲಿ ಮಾಲ್ ನಿರ್ಮಿಸಿದರೆ ವಾಹನ ಸವಾರರಿಗೆ ತೊಂದರೆ ಆಗಲಿದೆ. ಮಾರುಕಟ್ಟೆ ಸ್ಥಳಾಂತರಕ್ಕೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದ್ದರು.
ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೋಪಣ್ಣ ಅವರ ಏಕಸದಸ್ಯ ಪೀಠ, ಮಾರುಕಟ್ಟೆ ತೆರೆವುಗೊಳಿಸುವುದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಹೈಕೋರ್ಟ್ ಆದೇಶದಿಂದ ಬಿಬಿಎಂಪಿಗೆ ತೀವ್ರ ಮುಖಭಂಗ ಉಂಟಾಗಿದೆ. ಇತ್ತೀಚೆಗಷ್ಟೆ ಅಂಗಡಿಗಳನ್ನು ತೆರವುಗೊಳಿಸಲು ತೆರಳಿದ್ದ ಬಿಬಿಎಂಪಿ ಅಧಿಕಾರಿಗಳು ವ್ಯಾಪಾರಸ್ಥರ ಆಕ್ರೋಶಕ್ಕೆ ತುತ್ತಾಗಿ ವಾಪಾಸ್ಸಾಗಿದ್ದರು.
ಸಂಪಿಗೆ ರಸ್ತೆಯಲ್ಲಿ ಮಾಲ್ ನಿರ್ಮಾಣ ಸಾಧ್ಯವಿಲ್ಲ ಎಂಬ ವ್ಯಾಪಾರಸ್ಥರ ಮನವಿಗೆ ಸ್ಪಂದಿಸಿರುವ ನ್ಯಾಯಾಲಯ, ಮಾಲ್ ನಿರ್ಮಾಣ ಯೋಜನೆ ಕುರಿತು ವಿವರಣೆ ನೀಡುವಂತೆ ಸೂಚಿಸಿ ಪ್ರತಿವಾದಿಗಳಾದ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ, ಬಿಬಿಎಂಪಿ, ಬಿಡಿಎಗೆ ನೋಟಿಸ್ ಜಾರಿಗೊಳಿಸಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications