ಮೋದಿ ಪ್ರಧಾನಿ ಅಭ್ಯರ್ಥಿಯಲ್ಲ : ರಾಜನಾಥ್ ಸಿಂಗ್

ಕೋಲ್ಕತ್ತಾದಲ್ಲಿ ಮಂಗಳವಾರ ಮಾತನಾಡಿದ ರಾಜನಾಥ್ ಸಿಂಗ್, ನರೇಂದ್ರ ಮೋದಿಯವರು ದೇಶ ಮತ್ತು ವಿದೇಶಗಳಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದ್ದಾರೆ ಎಂಬುದು ಸತ್ಯ. ಆದರೆ, ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮೋದಿಯ ಗುಣಗಾನ ಮಾಡಿದ್ದ ರಾಜನಾಥ್ ಸಿಂಗ್ ಅವರ, ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಿಲ್ಲ ಎಂಬ ಹೇಳಿಕೆ ಸ್ವತಃ ಬಿಜೆಪಿ ನಾಯಕರಿಗೆ ಮತ್ತು ಜನರ ಅಚ್ಚರಿಗೆ ಕಾರಣವಾಗಿದೆ.
ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ನಿರ್ಣಯಿಸಲಾಗುತ್ತದೆ. ಮಾಧ್ಯಮಗಳು ಮತ್ತು ದೇಶದ ಜನರ ಅಭಿಪ್ರಾಯದಂತೆ ಮೋದಿಯವರನ್ನು ಪ್ರಧಾನಿಯಾಗಿ ಮಾಡಬೇಕು ಎಂದರೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇಂದು ಅಧ್ಯಕ್ಷರ ಘೋಷಣೆ ಸಾಧ್ಯತೆ : ದೆಹಲಿಯಲ್ಲಿ ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಕರ್ನಾಟಕದ ಬಿಜೆಪಿಗೆ ನೂತನ ಸಾರಥಿಯ ಘೋಷಣೆಯಾಗುವ ಸಂಭವಿದೆ.
ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ, ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮುಂತಾದವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿಗೆ ನೂತನ ಅಧ್ಯಕ್ಷರು ಯಾರು ಎಂದು ವಿವರವಾದ ಚರ್ಚೆ ನಡೆಯಲಿದೆ.
ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವು ಪ್ರಕಟಗೊಂಡಿರುವುದರಿಂದ ಇಂದು ರಾತ್ರಿ ಅಥವ ಬುಧವಾರ ಬೆಳಗ್ಗೆ ನೂತನ ಅಧ್ಯಕ್ಷರ ಘೋಷಣೆಯಾಗುವ ಸಂಭವವಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications