ಜಯನಗರ : ಎಲೆಕ್ಷನ್ ಟಿಕೆಟ್ ಯಾರಿಗೆ ಕೊಡ್ತಾರೆ?

BN Vijay Kumar, Jayanagar BJP MLA
ಅವರ ಹೆಸರು ರುದ್ರಪ್ಪ, ವಯಸ್ಸು 62. ವಾಸ ಜಯನಗರ. ವೃತ್ತಿಯಿಂದ ಸಿವಿಲ್ ಗುತ್ತಿಗೆದಾರ. ಆ ಕಾಲದಿಂದಲೂ ಭಾರತೀಯ ಜನತಾ ಪಕ್ಷದ ಅಭಿಮಾನಿ. ಪಕ್ಷದ ಮಾಜಿ ಕಾರ್ಯಕರ್ತ. ಕಾರ್ಯಕರ್ತನಾಗಿ ಮಾಜಿ ಆಗಿರುವುದಕ್ಕೆ ಅವರು ನೀಡುವ ಕಾರಣಗಳು ಎರಡು.

ಒಂದು) ಇಂದಿನ ವೇಗದ ಯುಗದಲ್ಲಿ ನಮ್ಮಂಥವರು ಪಕ್ಷಕ್ಕೆ ದುಡಿಯುವುದು ಕಷ್ಟಸಾಧ್ಯ. ಮೊಬೈಲ್ ಫೋನಿನಲ್ಲಿ ಅದೂ ಇನ್ನೊವಾ ಕಾರಿನಲ್ಲಿ/ಸ್ಮಾರ್ಟ್ ಫೋನಿನಲ್ಲಿ ರಾಜಕೀಯ ಮಾಡುವುದಕ್ಕೆ ಆಗುವುದಿಲ್ಲ. ಎರಡು) ಚುನಾವಣೆಗಳಲ್ಲಿ ಪಕ್ಷ ಗೆಲ್ಲುವುದು ಹೇಗೆ, ಸೋತರೆ ಅದಕ್ಕೆ ಕಾರಣಗಳೇನು? ತಲೆ ಬುಡ ಅರ್ಥವಾಗುವುದಿಲ್ಲ.

ಹಳೇ ಚಟ ಹೋಗುವುದಿಲ್ಲ. ವಾರಕ್ಕೆರಡು ಬಾರಿ ಪಕ್ಷದ ಕಚೇರಿಗೆ ಬಂದು ಕಾಫಿ ಕುಡಿದು ರಾಜಕೀಯ ಗಾಳಿಯನ್ನು ಮೈಗೆ ಸೋಂಕಿಸಿಕೊಳ್ಳದಿದ್ದರೆ ರುದ್ರಪ್ಪನವರಿಗೆ ತಿಂದ ಚಪಾತಿ ಜೀರ್ಣವಾಗುವುದಿಲ್ಲ. ಹಾಗಾಗಿ ಶಾಸಕ ಬಿ ಎನ್ ವಿಜಯಕುಮಾರ್ ಅವರ ಶಾಸಕರ ಕಚೇರಿ ಹೊರಾವಣದಲ್ಲಿ ಸುಮ್ಮನೆ ಕುಳಿತುಕೊಂಡಿದ್ದರು. ದಿನಾಂಕ 6 ಮಾರ್ಚ್ 2013.

ಜಯನಗರದ ಎಂಥ ಕ್ಷೇತ್ರವೆಂದರೆ ಇಲ್ಲಿ ಚುನಾವಣೆ ಬಂದದ್ದೂ ಗೊತ್ತಾಗುವುದಿಲ್ಲ, ಹೋದದ್ದೂ ಗೊತ್ತಾಗುವುದಿಲ್ಲ. ಚುನಾವಣೆ ದಿನಾಂಕ ಪ್ರಕಟಣೆ ಆಗುವ ಮುನ್ನವೇ ತಮಟೆ ಬಾರಿಸುವ ರಾಜಕಾರಣ ಜಯನಗರದಲ್ಲಿ ನಡೆಯುವುದಿಲ್ಲ. ಯಾಕೆಂದರೆ, ಇಲ್ಲಿ ಅದೆಲ್ಲ ಗಿಟ್ಟುವುದಿಲ್ಲ. ಗರಿಷ್ಠ ಅಂದರೆ 4ನೇ ಬ್ಲಾಕಿನ ಮಯ್ಯಾಸ್ ಹೋಟೆಲ್ ಸುತ್ತಮುತ್ತ ಸಮಸ್ತ ನಾಗರೀಕರಿಗೆ ಶಿವರಾತ್ರಿ ಶುಭಾಶಯಗಳನ್ನು ಕೋರುವ ಫ್ಲೆಕ್ಸ್ ಹಾಕಬಹುದು. ಅದನ್ನು ನೋಡುತ್ತ ಕಾಫಿ ಕುಡಿಯಬಹುದು.

ಅಸಲಿ ಭಾಜಪದ ಹಾಲಿ ಶಾಸಕ ಬಿ ಎನ್ ವಿಜಯ್ ಕುಮಾರ್ ಅವರಿಗೆ ಈ ಬಾರಿಯೂ ಟಿಕೆಟ್ ಗ್ಯಾರಂಟಿ ಎನ್ನಲಾಗುತ್ತಿದೆ. ಬಿಜೆಪಿ ಟಿಕೆಟ್ಟಿಗೆ ಇಲ್ಲಿ ಅಷ್ಟೊಂದು ಪೈಪೋಟಿ ಇಲ್ಲ. ಆದ್ರೆ, ಸಾರಕ್ಕಿಯ ಎಸ್ ಕೆ ನಟರಾಜ್ ಸುಮ್ಮನೆ ಕುಳಿತಿಲ್ಲ. ಏನೇ ಆಗಲಿ, ಶೇ 40 ರಷ್ಟೂ ಮತದಾನ ನಡೆಯದ ಈ ಕ್ಷೇತ್ರದಲ್ಲಿ ಚುನಾವಣೆ ಒಂದು ಜೋಕ್! ಯಾರಿಗಾದರೂ ಟಿಕೆಟ್ ಸಿಕ್ಕಲಿ, ಯಾರಾದರೂ ಗೆದ್ದುಕೊಳ್ಳಲಿ ಎಂಬ ಧೋರಣೆ ಶೇ 60ರಷ್ಟು ಮತದಾರರದ್ದು.

ಕಳೆದ ಬಾರಿ ಸ್ಪರ್ಧೆಗೆ ಇಳಿಯಲು ಸಿದ್ಧರಾಗಿದ್ದ ನಟರಾಜ್ ಅವರನ್ನು ಸಮಾಧಾನ ಪಡಿಸಿದ್ದು ಆರ್ ಅಶೋಕ್. "ನಿಮ್ಮನ್ನು ಮೇಯರ್ ಮಾಡ್ತೀವಿ, ಸ್ವಲ್ಪ ಸುಮ್ಮನೆ ಇರ್ರಿ, ವಿಜಯ್ ಕುಮಾರ್ ಈ ಬಾರಿ ಗೆಲ್ತಾರೆ, ಹಾಗಾಗಿ ಅವರಿಗೆ ಟಿಕೆಟ್ ಕೊಡ್ತೀವಿ. ನಿಮಗೆ ಮುಂದಿನ ಬಾರಿ ಛಾನ್ಸ್ ಕೊಡ್ತೀವಿ" ಅಂದಿದ್ರು. ಅದೇ ಮಾತನ್ನು ಕಚ್ಚಿಕೊಂಡಿರುವ ನಟರಾಜ್ ಟಿಕೆಟ್ಟಿಗೆ ಬಲೆ ಬೀಸಿದ್ದಾರೆ. ಮೀನು ಸಿಗುವುದು ಕಷ್ಟನೇ.

ಕಾಂಗ್ರೆಸ್ ಪಾಳೆಯದಲ್ಲಿ ಟಿಕೆಟ್ಟಿಗಾಗಿ ಹತ್ತಾರು ಹೆಸರುಗಳು ಸುಳಿದಾಡುತ್ತಿವೆ. ಪ್ರಮುಖವಾಗಿ ಕಳೆದ ಬಾರಿ ಸೋತಿರುವ ಸುರೇಶ್, ಪ್ರೊ. ಬಿ. ಕೆ, ಚಂದ್ರಶೇಖರ್ ಅವರ ಹೆಸರುಗಳು ಓಡಾಡುತ್ತಿದ್ದರೂ ಅಂತಿಮವಾಗಿ ಸ್ಪರ್ಧೆ ಇರೋದು ಬನ್ನೇರುಘಟ್ಟ ರಸ್ತೆ ಮೀನಾಕ್ಷಿ ಮಾಲ್ ಪಾಲುದಾರ ವೆಂಕಟೇಶ್ ಮತ್ತು ಮಾರೇನ ಹಳ್ಳಿಯ ಜಿ ಎನ್ ಆರ್ ಕಲ್ಯಾಣ ಮಂಟಪದ ಮಾಲೀಕ ಜಿ ಎನ್ ಆರ್ ಮೋಹನ್ ನಡುವೆ.

ನೂರಕ್ಕೆ ನೂರ ಹತ್ತು ಪರ್ಸೆಂಟ್ ಟಿಕೆಟ್ ವೆಂಕಟೇಶ್ ಗೇ ಸಿಗೋದು, ಬರ್ಕೋ ಹೋಗಿ ಎನ್ನುತ್ತಾರೆ ವೆಂಕಟೇಶ್ ಅವರ ಹತ್ತಿರದ ಬಂಧು ಸ್ವರೂಪ್. ನಮ್ಮ ಹೆಸರೂ ಬರ್ಕೊಳ್ಳಿ ಸಾರ್ ಎಂದವರು ಜಿ ಎನ್ ಆರ್ ಮೋಹನ್ ಅಭಿಮಾನಿಗಳು. ಈ ಮಧ್ಯೆ, ಗುರಪ್ಪನಪಾಳ್ಯದ ಮಾಜಿ ಕಾರ್ಪೋರೇಟರ್ ರಿಜ್ವಾನ್ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. ಆದರೆ, ನಾಲಕ್ಕು ಬಾರಿ ಇಲ್ಲಿ ಗೆದ್ದು ಪಕ್ಷದ ಮೇಲೆ ಹಿಡಿತ ಸಾಧಿಸಿರುವ ರಾಮಲಿಂಗಾರೆಡ್ಡಿ ರಿಜ್ವಾನ್ ಗೆ ಸೊಪ್ಪು ಹಾಕಲ್ಲ.

ಒಟ್ಟಾರೆ, ಹಾಲಿ ಶಾಸಕ ಬಿ ಎನ್ ವಿಜಯ ಕುಮಾರ್ ಅವರ ವಿರುದ್ಧ ಯಾರನ್ನು ನಿಲ್ಲಿಸಬೇಕು ಎಂಬ ನಿರ್ಧಾರ ಡಾ. ಪರಮೇಶ್ವರ್ ಅಥವಾ ಸಿದ್ದರಾಮಯ್ಯ ಅಥವಾ ಸೋನಿಯಾ ಗಾಂಧಿ ಕೈಗೊಳ್ಳಲು ಸಾಧ್ಯವೇ ಇಲ್ಲ. ಯಾಕಂದ್ರೆ, ರಾಮಲಿಂಗಾರೆಡ್ಡಿ ಮತ್ತು ಬಿಕೆ ಹರಿಪ್ರಸಾದ್ ಪಕ್ಷದಲ್ಲಿ ಇರೋದಾದರೂ ಯಾಕೆ!

ಯಡಿಯೂರಪ್ಪ ಅವರ ಪಕ್ಷದ ಹುರಿಯಾಳು, ಯುವಕ ರವಿಕುಮಾರ್. ಮತದಾರರನ್ನು ತಲಪುವ ಪ್ರಯತ್ನವನ್ನು ಈಗಾಗಲೇ ಆರಂಭಿಸಿದ್ದಾರೆ. ಇನ್ನು, ಜೆ ಡಿ ಎಸ್ ಅಭ್ಯರ್ಥಿ ಸಮೀವುಲ್ಲ ಹಠ ಬಿಡದ ತ್ರಿವಿಕ್ರಮ. ಮತ್ತೆ ಸ್ಪರ್ಧೆಗೆ ಇಳಿಯುವುದು ನಿಶ್ಚಿತ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+