ಗೆದ್ದಿದ್ದು ಮತದಾರ, ಬಿದ್ದ ಬಿಜೆಪಿಗೆ ಮುಂದಿದೆ ಮಾರಿಹಬ್ಬ

ಗೆದ್ದವ ಮತದಾರ- ಬಿದ್ದವ ಬಿಜೆಪಿ: ಇಂದು ಗೆದ್ದಿರುವುದು ನಿಜಕ್ಕೂ ಮತದಾರನೇ. ಈ ಮತದಾರ ಉಳಿದ ಮತದಾರರಿಗೆ ವಿಧಾನಸಭೆ ಚುನಾವಣೆ ವೇಳೆಗೆ ಮಾದರಿಯಾಗುತ್ತಾನಾ ಎಂಬ ಆಸೆ ಚಿಗುರಿಕೊಂಡಿದೆ. ಏಕೆಂದರೆ ಅತಂತ್ರ/ಪರತಂತ್ರ, ಕುತಂತ್ರಗಳಿಗೆ ಅವಕಾಶ ನೀಡದೆ clear mandate ನೀಡಿದ್ದಾನೆ.
ಒಟ್ಟಾರೆ ನಾಡಿಮಿಡಿತ ಅರಿಯುವುದಾದರೆ ರಾಜ್ಯದ ಜನತೆ ಕಾಂಗ್ರೆಸ್ಸಿನತ್ತ ವಾಲಿರುವುದು ಸ್ಪಷ್ಟವಾಗಿದೆ. ಇತರೆಲ್ಲ ಪಕ್ಷಗಳು ಗಳಿಸಿರುವ ಮತಗಳನ್ನು ಒಟ್ಟು ಮಾಡಿದರೂ ಕಾಂಗ್ರೆಸ್ ಗಳಿಸಿರುವ ಮತದ ಅರ್ಧದಷ್ಟೂ ಇಲ್ಲ. ಹಾಗಂತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ clear mandate ಗ್ಯಾರಂಟಿ ಅಂತ ಷರಾ ಬರೆದರೆ ದಡ್ಡತನವಾದೀತು. ಆದರೂ...
ಆಡಳಿತ ವಿರೋಧಿ ಅಲೆ ನೋಡಿದರೆ ಮುಂದಿದೆ ಮಾರಿ ಹಬ್ಬ ಅನ್ನುವುದರಲ್ಲಿ ಅನುಮಾನವಿಲ್ಲ. ಈ ಫಲಿತಾಂಶದ ಸಮ್ಮುಖದಲ್ಲಿ ಬಿಜೆಪಿ ಪರದಾಡುವುದಂತೂ ನಿಶ್ಚಿತ. ತಕ್ಷಣಕ್ಕೆ ಬಿಜೆಪಿಗೆ ಎದುರಾಗಿರುವುದು ಅಧ್ಯಕ್ಷ ಸ್ಥಾನ ತುಂಬುವ ಹೊಣೆಗಾರಿಕೆ. 'ಶಿವಮೊಗ್ಗದಲ್ಲೇ ಕಾದಿದೆ ಹೀನಾಯ ಸೋಲು' ಅಂತ 'ಜಾಣ' ಈಶ್ವರಪ್ಪಗೆ ಯಾರು ಭವಿಷ್ಯ ಹೇಳಿದ್ದರೋ ಪುಣ್ಯಾತ್ಮ ಸೈಲೆಂಟಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದುಬಿಟ್ಟರು. ಈಗ ಆ ಸ್ಥಾನವನ್ನು ತುಂಬುವುದು ಪಕ್ಷಕ್ಕೆ ನಿಜಕ್ಕೂ ಪೀಕಲಾಟಕ್ಕೆ ಇಟ್ಟುಕೊಂಡಿದೆ.
ಈಗಾಗಲೇ ಕಾಡುತ್ತಿರುವ ನೂರೆಂಟು ಸಮಸ್ಯೆಗಳ ಜತೆಗೆ ಈಗ ಸೋಲಿನ ಸುಳಿ. ಇದನ್ನು ಈಜಿ ಪಾರಾಗಲು ಎಂಟೆದೆ ಬಂಟನೇ ಬರಬೇಕು. ಆದರೆ ಆ ಛಾತಿಯಿರುವ ಯಾವೊಬ್ಬ ನಾಯಕನೂ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪಕ್ಷಕ್ಕೆ ಇದ್ದ ಒಂದು ಭರವಸೆ ಸದಾನಂದ ಗೌಡ ಎನ್ನಬಹುದಿತ್ತು. ಆದರೆ ಗೌಡರು hit wicket ಆದವರಂತೆ 'ಸೋಲು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಬಲವಾದ ಹೊಡೆತವನ್ನೇ ಕೊಟ್ಟಿದೆ' ಅಂದುಬಿಟ್ಟಿದ್ದಾರೆ. ಉಡುಪಿ ಮತ್ತು ಮಂಗಳೂರಿನಲ್ಲಿ ಪಕ್ಷ ಸೋತಿರುವುದು ಸದಾನಂದರಿಗೆ ನಿಜಕ್ಕೂ ಜೀರ್ಣಿಸಿಕೊಳ್ಳಲಾಗಿಲ್ಲ.
ಇಲ್ಲಿ ಯಡಿಯೂರಪ್ಪ ಹೊಸ ಪಕ್ಷ ಕಟ್ಟಿ ಬಿಜೆಪಿಯನ್ನು ಮುಳುಗಿಸಿದರೂ ಅಥವಾ ಯಡಿಯೂರಪ್ಪನವರನ್ನು ಕತ್ತೆ ಎಂದು ಜರಿದಿದ್ದ ರವಿ, ಸೀಟಿ ಊದಿರುವಂತೆ ಮತ್ತೆ ಬಿಜೆಪಿ+ಕೆಜೆಪಿ ಒಂದಾಗಬೇಕೋ ಎಂಬ ಚರ್ಚೆಗೆ ಪಕ್ಷ ವೇದಿಕೆ ಒದಗಿಸುತ್ತದಾ? ಕಾದುನೋಡಬೇಕು.
ಎಲ್ಲ ಆಮಿಷಗಳಿಗೂ ಕೈಯೊಡ್ಡಿದ್ದ ಮತದಾರ ಕೊನೆಗೆ ಆಮಿಷವೊಡ್ಡಿದವರಿಗೇ ಕೈ ಕೊಟ್ಟು, ಕಾಂಗ್ರೆಸ್ ಕೈ ಹಿಡಿದಿರುವುದು ನೋಡಿದರೆ ಆತನನ್ನು ಬುದ್ಧಿವಂತ ಅನ್ನಲೇಬೇಕು. ಬಿಸ್ಕತ್ ಗೆ ಬಾಯಿ ಹಾಕಿದರೂ ಆ ನಶೆಯಲ್ಲೇ ತೇಲಿಹೋಗದೆ ವಾಸ್ತವ ನೆಲೆಗಟ್ಟಿನಲ್ಲಿ, ಕಳೆದೈದು ವರ್ಷಗಳಲ್ಲಿ ತಾನು ಅನುಭವಿಸಿದ ಪಡಿಪಾಟಲನ್ನು ಮುಟ್ಟಿನೋಡಿಕೊಳ್ಳುತ್ತಲೇ ತೀರ್ಪುನೀಡಿದ್ದಾನೆ.












Click it and Unblock the Notifications