ಕಾರ್ಯಕರ್ತರಿಗೆ ಇಂದೇ ರಣವೀಳ್ಯ ನೀಡಿದ ಪರಮೇಶಿ
ಬೆಂಗಳೂರು, ಮಾ.11: ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಮಣ್ಣುಮುಕ್ಕಿಸಿದ್ದರೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಹಾಲುಕುಡಿದಷ್ಟು ಸಂತೋಷವಾಗಿದೆ.
ಆದರೂ ಕಾಂಗ್ರೆಸ್ ನಾಯಕರು ಬೀಗದೆ ಸಂಯಮದಿಂದ/ ಎಚ್ಚರಿಕೆಯಿಂದ ಮಾತನಾಡಿದ್ದಾರೆ. ಇದೇ ವೇಳೆ ಆಡಳಿತಾರೂಢ ಬಿಜೆಪಿ ರಾಜಕೀಯದಲ್ಲಿ ಏರಿಳಿತ ಸಹಜ ಎಂದು ಸಮಾಧಾನಪಟ್ಟುಕೊಂಡಿದ್ದಾರೆ.
ಕಾಂಗ್ರೆಸ್ ಗೆದ್ದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದರೆ ಆಳವಾಗಿ ಅಧ್ಯಯನ ಮಾಡಿ, ಹಿಂದಿನ ಬಾರಿಯ ಚುನಾವಣೆ ಫಲಿತಾಂಶಕ್ಕೆ ಹೋಲಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಈ ಕ್ಷಣಕ್ಕೆ ಮತದಾರನ ಮನಸ್ಸಿನಲ್ಲಿ ಹೇಗೆ ಬೇರೂರಿದ್ದಾನೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅದಾಗಲೇ ಅರಿತುಕೊಂಡಿದ್ದಾರೆ.
ಆದರೆ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದೆ/ ಮೈಮರೆಯದೇ ಇನ್ನಷ್ಟು ಉತ್ಸಾಹದಿಂದ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಇಂದೇ ರಣವೀಳ್ಯ ನೀಡಿದ್ದಾರೆ.

ಸಿದ್ದರಾಮಯ್ಯ ಏನಂದಿದ್ದಾರೆ?:
ಇದು ಶೇ. 30ರಷ್ಟು ಮತದಾರರದ್ದಷ್ಟೇ ಅಭಿಪ್ರಾಯ. ಇದನ್ನೇ ಮುಂದಿನ ಚುನಾವಣೆಗೂ ಅನ್ವಯಿಸಿಕೊಳ್ಳಲಾಗದು. ಇಲ್ಲಿ ನಗರ/ಪಟ್ಟಣ ಪ್ರದೇಶದವರಷ್ಟೇ ಮತ ಹಾಕಿರುವುದು. ಗ್ರಾಮಾಂತರ ಮತದಾರನೂ ಮುಖ್ಯ. ಹಾಗಾಗಿ ವಿಧಾನಸಭೆ ಚುನಾವಣೆ ಬೇರೆಯದ್ದೇ ಆಗಿರುತ್ತದೆ. ಆದರೂ ಗೆಲುವು ಗೆಲುವೇ.

ಮಾಜಿ ಸಿಎಂ ಸದಾನಂದ ಗೌಡ
ಬಳ್ಳಾರಿ ಫಲಿತಾಂಶವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಒಟ್ಟಾರೆ ಫಲಿತಾಂಶ ಆಘಾತಕಾರಿಯಾಗಿದೆ. ಪತದಾರರು ಪಾಠ ಕಲಿಸಿದ್ದಾರೆ. ಆಂತರಿಕ ಕಲಹಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.
ತಪ್ಪುಗಳನ್ನು ತಿದ್ದುಕೊಂಡು ಮುಂದೆ ಹೋಗುತ್ತೇವೆ. ಆತ್ಮಾವಲೋಕನ ಮಾಡಿಕೊಂಡು ಜನಾದೇಶಕ್ಕೆ ತಲೆ ಬಾಗಿ ಮುಂದಿನ ಚುನಾವಣೆ ಗೆಲುವು ಸಾಧಿಸಲು ತಂತ್ರ ರೂಪಿಸುತ್ತೇವೆ.

ಸಿಎಂ ಜಗದೀಶ್ ಶೆಟ್ಟರ್:
ಈ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜಕೀಯದಲ್ಲಿ ಏರಿಳಿತ ಸಾಮಾನ್ಯ. ಆದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 741ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆಯಾಗಿದೆ.

ಬಿಜೆಪಿ ವಕ್ತಾರ ಸಿಟಿ ರವಿ:
ಬಿಜೆಪಿ ವಿಭಜನೆಯಿಂದ ಸೋಲಾಯಿತು. ವ್ಯಕ್ತಿಗತವಾಗಿ ಕೆಜೆಪಿ ರಚನೆಯಾಗಿದ್ದು ಪಕ್ಷಕ್ಕೆ ಮುಳುವಾಯಿತು. ಕೆಜೆಪಿ ಬಿಜೆಪಿ ಒಂದಾಗಿದ್ದರೆ ಜಯ ನಮ್ಮದೇ ಆಗುತ್ತಿತ್ತು.












Click it and Unblock the Notifications