ಎಸ್.ಆರ್.ಹಿರೇಮಠ್ ರಿಂದ ಜನಜಾಗೃತಿ ಅಭಿಯಾನ

ರಾಜ್ಯಾದ್ಯಂತ ನಡೆಯಲಿರುವ ಅಭಿಯಾನದಲ್ಲಿ ಮತದಾರರಿಗೆ ಆಮಿಷಗಳಿಗೆ ಬಲಿಯಾಬೇಡಿ, ಕಡ್ಡಾಯವಾಗಿ ಮತದಾನ ಮಾಡಿ ಮುಂತಾದ ಸಂದೇಶ ಸಾರಲು ಹಿರೇಮಠ್ "ಜನಸಂಗ್ರಾಮ ಪರಿಷತ್" ಎಂಬ ಅಭಿಯಾನ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಎರಡು ಹಂತದ ಅಭಿಯಾನ ಪೂರ್ಣಗೊಂಡಿದ್ದು, ಮೈಸೂರಿನಲ್ಲಿ ಮೂರನೇ ಹಂತದ ಅಭಿಯಾನ ಪ್ರಾರಂಭವಾಗಲಿದೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಿಂದ ಮಾ.22ರಂದು ಮೂರನೇ ಹಂತದ ಜಾಗೃತಿ ಅಭಿಯಾನ ಪ್ರಾರಂಭವಾಗಲಿದ್ದು, ಚಾಮರಾಜನಗರ, ಮೈಸೂರು, ಮಂಡ್ಯ ಮಾರ್ಗವಾಗಿ ಅಭಿಯಾನ ಸಾಗುತ್ತಾ ಮಾ.24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೊನೆಗೊಳ್ಳಲಿದೆ.
ಜನಸಂಗ್ರಾಮ ಪರಿಷತ್ ನ ಸದಸ್ಯರಾದ ವಸಂತ ಕುಷ್ಟಗಿ ಮೈಸೂರಿನಲ್ಲಿ ಅಭಿಯಾನದ ಕುರಿತು ಮಾಹಿತಿ ನೀಡುತ್ತಾ, ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕಾಗುತ್ತಿರುವ ನಷ್ಟ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮುಂತಾದ ಸಾಮಾಜಿಕ ಕಳಕಳಿಯ ವಿಷಯಗಳ ಮೇಲೆ ಹಿರೇಮಠ್ ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಚುನಾವಣಾ ವ್ಯವಸ್ಥೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅನೇಕ ಹಗರಣಗಳನ್ನು ಮಾಡಿದ ರಾಜಕಾರಣಿಗಳು ನಮ್ಮ ನಡುವೆ ಇದ್ದಾರೆ. ಅವರು ಅಕ್ರಮವಾಗಿ ಗಳಿಸಿದ ಸಂಪತ್ತನ್ನು ಚುನಾವಣೆಯಲ್ಲಿ ಖರ್ಚುಮಾಡಿ ಗೆಲವು ಸಾಧಿಸುತ್ತಾರೆ.
ಆದ್ದರಿಂದ ಮತದಾರರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಜನ ಸಂಗ್ರಾಮ ಪರಿಷತ್ ಈ ಅಭಿಯಾನ ಹಮ್ಮಿಕೊಂಡಿದೆ ಎಂದರು. ರಾಜ್ಯದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಯಾನ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications