ಬಿಜೆಪಿ ವಿರುದ್ಧ ಜನಾರ್ಧನ ಪೂಜಾರಿ ವಾಗ್ದಾಳಿ

ಮಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ಧನ ಪೂಜಾರಿ, ಮಂಗಳೂರು ಹೋಂ ಸ್ಟೇ ದಾಳಿಯನ್ನು ಉಲ್ಲೇಖಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಶೋಷಣೆ ಹೆಚ್ಚಾಗಿದೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿ ಪರಿವಾರದ ಸಂಘಟನೆಗಳೇ ಮಂಗಳೂರು ಹೋಂ ಸ್ಟೇ ದಾಳಿಯ ರೂವಾರಿಗಳು ಎಂದು ಆರೋಪಿಸಿದರು.
ಮಹಿಳೆಯರನ್ನು ಶೋಷಿಸಿದ ಆರೋಪ ಹೊತ್ತಿರುವವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇಂತಹವರು ಮಹಿಳೆಯರಿಗೆ ಹೇಗೆ ರಕ್ಷಣೆ ನೀಡಲು ಸಾಧ್ಯ. ಸಚಿವರನ್ನು ಸಂಪುಟದಿಂದ ಉಚ್ಚಾಟಿಸಿ ನಂತರ ಮಹಿಳೆಯರ ರಕ್ಷಣೆಯ ಬಗ್ಗೆ ಮಾತನಾಡುವಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಸಚಿವರು, ಶಾಸಕರ ಭ್ರಷ್ಟಾಚಾರ, ಸಜ್ಜನ ಪಕ್ಷಪಾತ, ಪಕ್ಷದ ಆಂತರಿಕ ಜಗಳಗಳಿಂದ ಬಿಜೆಪಿ ಸಂಪೂರ್ಣವಾಗಿ ತುಂಬಿ ಹೋಗಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಪರದಾಡುರತ್ತಿರುವ ನಾಯಕರು, ರಾಜ್ಯ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗಾಗಿ ನೀಡದ ಹಣವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ ಎಂದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬಾರದೆಂದು ಜನರಿಗೆ ಮನವಿ ಮಾಡಿದರು.
ಜೆಡಿಎಸ್ ವಿರುದ್ಧವೂ ಗುಡುಗಿದ ಪೂಜಾರಿ, ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ದೂರಿದರು. ಜೆಡಿಎಸ್ ಪಕ್ಷ ಸಂಪೂರ್ಣ ಕುತಂತ್ರದಿಂದ ರಾಜಕಾರಣ ಮಾಡುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜೆಡಿಎಸ್ ತಂತ್ರ ರೂಪಿಸಿದೆ ಎಂದು ಹೇಳಿದರು.












Click it and Unblock the Notifications