ಪುತ್ತೂರು: ಬಂಟರ ಶಕುಂತಲಾ vs ಸದಾನಂದರ ಬಂಟ

ಒಂದು ಕಡೆಯಿಂದ ಬಿಜೆಪಿ, ಕೆಜೆಪಿಗೆ ತದನಂತರ ಜೆಡಿಎಸ್, ಈ ಮಧ್ಯೆ ತಮ್ಮ ರಾಜಕೀಯ ಗುರು ಉರಿಮಜಲು ರಾಮ ಭಟ್ಟರಿಗೂ ಕೈ ಕೊಟ್ಟು ಶಕುಂತಲಾ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಕೈಹಿಡಿದಿರುವುದು ತುಸು ಅಚ್ಚರಿಯೇ ಆಗಿದ್ದರೂ ಅವರನ್ನು ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಅವರಿಗಾದ 'ಅನ್ಯಾಯಗಳನ್ನು' ನಿಕಟವಾಗಿ ಬಲ್ಲವರಿಗೆ ಇದು ನಿರೀಕ್ಷಿತವೇ ಅನಿಸಿದೆ.
ಈ ಬೆಳವಣಿಗೆಗಳ ಮಧ್ಯೆ ಮುಂದಿನ ವಿಧಾನಸಭೆ ಚುನಾವಣೆ ರಂಗೇರಿದೆ. ಇಂಟರೆಸ್ಟಿಂಗ್ ಸಂಗತಿಯೆಂದರೆ, ಇತ್ತ ಶಕುಂತಲಾ ಅವರು ಕಾಂಗ್ರೆಸ್ ಅಪ್ಪುವುದಕ್ಕೂ ಮುನ್ನವೇ 'ಆಯಮ್ಮ ಇನ್ನು ತಮ್ಮ ಪಾರ್ಟಿಗೆ ಬರುವುದಿಲ್ಲ' ಎಂಬುದನ್ನು ಖಚಿತಪಡಿಸಿಕೊಂಡ ಜೆಡಿಎಸ್ ಅಧಿನಾಯಕ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ವತಿಯಿಂದ ಹುರಿಯಾಳನ್ನು ಅದಾಗಲೇ ರೆಡಿ ಮಾಡಿದ್ದಾರೆ.
ಈ ಮಧ್ಯೆ, ಬಿಜೆಪಿಯಿಂದ ರೆಬೆಲ್ ಆಗುವ ಸೂಚನೆಗಳನ್ನು ನೀಡುತ್ತಿರುವ ಮಾಜಿ ಸಿಎಂ ಸದಾನಂದ ಗೌಡರು ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಹತ್ತಿರವಾಗುತ್ತಿದ್ದಾರೆ. ಅಂದರೆ ಪುತ್ತೂರಿನ ಮಾಜಿ ಶಾಸಕ ಸದಾನಂದರ ಹತ್ತಿರದ ಸಂಬಂಧಿ ಇಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಆಗಿ ಚಲಾವಣೆಗೆ ಬಂದಿದ್ದಾರೆ.

ಬಂಟರ ಶಕುಂತಲಾ vs ಸದಾನಂದರ ಬಂಟ:
ಒಂದು ವೇಳೆ ಬಂಟರ ಶಕುಂತಲಾ ಮತ್ತು ಸದಾನಂದರ ಬಂಟ ಕಣ್ಣಕ್ಕಿಳಿಯುವುದು ಅಂತಿಮವಾದರೆ ಇಲ್ಲಿ ಸ್ಪರ್ಧೆ ಅವರಿಬ್ಬರ ಮಧ್ಯೆಯಷ್ಟೇ. ಬಿಜೆಪಿ/ಕೆಜೆಪಿ ಬೋರ್ಡಿಗೂ ಇರುವುದಿಲ್ಲ ಎಂಬುದು ಸ್ಥಳೀಯ ರಾಜಕೀಯ ಪಂಡಿತರ ಸ್ಪಷ್ಟ ಅನಿಸಿಕೆ. ಒಕ್ಕಲಿಗ-ಗೌಡ ಸಮುದಾಯದ ಮತದಾರರು ಇಲ್ಲಿ ನಿರ್ಣಾಯಕವಾಗುತ್ತಾರೆ. ಶಕುಂತಲಾ ಇಲ್ಲಿನ ಬಂಟರ ಸಮುದಾಯಕ್ಕೆ ಒಪ್ಪಿಗೆಯಾಗುವ ಕ್ಯಾಂಡಿಡೇಟ್ ಎಂಬುದು ಗಮನಾರ್ಹ.

ಯಾರದು ಸದಾನಂದರ ಬಂಧು
ಕುಕ್ಕೆ ಸುಬ್ರಮಣ್ಯದ ಬಿಎನ್ ದಿನೇಶ್ ಪಕ್ಕದ ಸುಳ್ಯ ತಾಲೂಕಿನವರು. ಸದಾನಂದ ಗೌಡರ ಅಣ್ಣ ಭಾಸ್ಕರ ಗೌಡರ ಬಾವಮೈದುನನೇ ಈ ದಿನೇಶ್. ಮಂಡೆಕೋಲಿನ ದೇವರಗುಂಡಾದಲ್ಲಿ ಇವರು ವ್ಯವಸಾಯ ಮಾಡಿಕೊಂಡಿದ್ದಾರೆ. ಜತೆಗೆ ರಾಜಕಾರಣ ಕುಟುಂಬದಿಂದ ಬಂದಿರುವುದರಿಂದ ಸಾಕಷ್ಟು ಬಿಸಿನೆಸ್ ಕಾಂಟ್ಯಾಕ್ಟುಗಳೂ ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಸದಾನಂದರ ಅಚ್ಚುಮೆಚ್ಚಿನ ಹುಡುಗ.
ಕಳೆದ ವರ್ಷದ ತಾವು ಮಂಡಿಸಿದ ಬಜೆಟ್ಟಿನಲ್ಲಿ ತವರೂರಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅದನ್ನು ದಿನೇಶ್ ಬಂಡವಾಳ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಇಲ್ಲಿ ಕೇಳಿಬಂದಿವೆ. ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ದಿನೇಶ್ ಅವರ ಖ್ಯಾತಿ ಹಬ್ಬಿದೆ. ಇಲ್ಲಿನ ಯುವ ಸಮೂಹಕ್ಕೆ ಅಲ್ಲಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಮೂಲಕ 'ಆಪತ್ಬಂಧು' ಎನಿಸಿಕೊಂಡಿದ್ದಾರೆ. ದಿನೇಶರನ್ನೇ ಗೆಲ್ಲಿಸುವುದು ಎಂದು ಇಲ್ಲಿನ ಯುವಕರು ಎದೆತಟ್ಟಿಕೊಂಡು ಹೇಳುತ್ತಿದ್ದಾರೆ.

ಮಾಜಿ ಸಚಿವೆ ಶೋಭಾ ಹೆಂಗೆ?
ಶೋಭಾ ಕರಂದ್ಲಾಜೆಗೆ ಪುತ್ತೂರು ತವರಿನ ಮನೆಯೇ. ಆದರೆ ಈ ಚಾರ್ವಾಕ ಹೆಣ್ಣು ಮಗಳು ಬೆಂಗಳೂರಿಗೆ ಅಡಿಯಿಟ್ಟನಂತರ ಸ್ಥಳೀಯರಿಂದ ಬಹುದೂರವೇ ಉಳಿದಿದ್ದಾರೆ. ಜತೆಗೆ, ಅಲ್ಲೇ ಬೆಂಗಳೂರಿನಲ್ಲಿ ಯಶವಂತಪುರ ಅಥವಾ ರಾಜಾಜಿನಗರ ಎನ್ನುತ್ತಿರುವುದರಿಂದ ಪುತ್ತೂರಿಗೆ ಬಂದು ಒಂದು ಕಾಲದ ಗೆಳತಿ ಶಕುಂತಲಾ ವಿರುದ್ಧ ಸ್ಪರ್ಧಿಸುವುದು ದೂರದ ಮಾತಾಗಿದೆ. ಇಲ್ಲಿನ ಒಕ್ಕಲಿಗ-ಗೌಡರೂ ಶೋಭಾಗೆ ವಿರುದ್ಧವಾಗಿ ನಿಂತು ಯಾವುದೋ ಕಾಲವಾಗಿದೆ. ಅದನ್ನು ಅರಿತೇ ಕೆಜೆಪಿ ನಾಯಕರಾಗಿ ಯಡಿಯೂರಪ್ಪನವರು ಶಕುಂತಾಲಾರನ್ನು ಕೆಜೆಪಿಗೆ ಕರೆತರಲು ವ್ಯರ್ಥ ಸಾಹಸಪಟ್ಟರು. ಹಾಗಾಗಿ, ಕೆಜೆಪಿಗೆ ಇಲ್ಲಿ ನೆಲೆಯಿಲ್ಲ ಎನ್ನುತ್ತಾರೆ ಸ್ಥಳೀಯರು.

ತಣ್ಣಗಾದ ಸ್ವಾಭಿಮಾನದ ಭಟ್ಟರು
ಅತ್ತ ಯಡಿಯೂರಪ್ಪ ಅವರು ಬಿಜೆಪಿಯಿಂದ ಹೊರಬೀಳುತ್ತಿದ್ದಂತೆ ಈ ಭಾಗದಲ್ಲಿ ಪಕ್ಷದ ಮೇಲೆ ಹಿಡಿತವಿರಿಸಿಕೊಂಡಿದ್ದ ಸ್ವಾಭಿಮಾನಿ ವೇದಿಕೆಯ ಉರಿಮಜಲು ಕೆ. ರಾಮಭಟ್ಟ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಾರೆ ಎಂದೇ ಎಣಿಸಲಾಗಿತ್ತು. ಆದರೆ ಇಲ್ಲಿನ ರಾಜಕೀಯಕ್ಕೆ ಹಳೆಯ ಕಾಲದ ಭಟ್ಟರು ಬೇಡವಾಗಿದ್ದಾರೆ. ಭಟ್ಟರ ಕಾಲದ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಅಜಗಜಾಂತರವಿದೆ. ಹಾಗಾಗಿ ಭಟ್ಟರ ಫ್ಯಾಕ್ಟರ್ ಇಲ್ಲಿ ತಾಳೆಯಾಗುವುದಿಲ್ಲ ಎಂಬುದು ಸ್ವತಃ ಬಿಜೆಪಿಗೇ ಮನದಟ್ಟಾಗಿದೆ. ಹಾಗಾಗಿ ಬಿಜೆಪಿಗೆ ಈ ಬಾರಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದು ಎಂದು ಮಲ್ಲಿಕಾ ಪ್ರಸಾದರ ಕಟ್ಟರ್ ಅಭಿಮಾನಿಗಳಿಗೂ ಮನವರಿಕೆಯಾಗಿದೆ. ಹಾಗಾಗಿ, ಕೆಜೆಪಿಗೆ ಇಲ್ಲಿ ನೆಲೆಯಿಲ್ಲ ಎನ್ನುತ್ತಾರೆ ಸ್ಥಳೀಯರು.

ಶಕ್ಕು ಅಕ್ಕ ಪಕ್ಕಾ
2004ರ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದು, 2008ರಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಸ್ವಲ್ಪದರಲ್ಲಿ ಸೋತಿದ್ದರು. ಮತ್ತೆ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಲೇಬೇಕೆಂದು ನಿರ್ಧರಿಸಿ, ದಿನನಿತ್ಯವೂ ಅದೇ ಲೆಕ್ಕಾಚಾರದಲ್ಲಿ ತೊಡಗಿದರು. ಜೆಡಿಎಸ್/ಕೆಜೆಪಿ ನಾಯಕರೇ ಶಕುಂತಲಾರ ಮನೆಯಂಗಳದಲ್ಲಿ ಕಾಣಿಸಿಕೊಂಡರು. ಅವರಿಗೆಲ್ಲ ಮಣೆ ಹಾಕದೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಮತ್ತು ಕಾಂಗ್ರೆಸ್ ಟಿಕೆಟ್ ಅನ್ನು ಖಚಿತಪಡಿಸಿಕೊಂಡೇ ಮತ್ತೊಂದು ಸುತ್ತಿನ ರಾಜಕೀಯ ಆಟಕ್ಕೆ ಇಳಿದಿದ್ದಾರೆ. ಮತ್ತು ಹಿಂದಿನ ಲೆಕ್ಕಾಚಾರ ನೋಡಿದರೆ ಅವರ ಗೆಲುವು ನಿರಾಯಾಸ ಎನ್ನುತ್ತಾರೆ ಇಲ್ಲಿನ ಕಾಂಗ್ರೆಸ್ ಮಂದಿ. ಆದರೆ ಸದ್ಯಕ್ಕೆ ಇಲ್ಲಿನ ಪುರಸಭಾ ಚುನಾವಣೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರ ಸಾರಥ್ಯದಲ್ಲೇ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಮತದಾರನ ಒಲವು ಯಾರತ್ತಲೋ!?












Click it and Unblock the Notifications