ಸೇನಾ ನೇಮಕಾತಿಗಾಗಿ ಮುಗಿಬಿದ್ದ ಕಾಶ್ಮೀರಿ ಯುವಕರು

ನೂರಾರು ಕಾಶ್ಶೀರಿ ಯುವಕರು ಸೇನೆ ಸೇರಲು ಉತ್ಸಾಹ ತೋರಿಸುತ್ತಿರುವುದು ಸ್ವತಃ ಸೇನಾ ಆಡಳಿತಾಧಿಕಾರಿಗಳನ್ನೆ ಅಚ್ಚರಿಗೊಳಿಸಿದೆ. ಅರ್ಜಿ ಸಲ್ಲಿಸಿದ ಕಾಶ್ಮೀರ ಕಣಿವೆಯ ನೂರಾರು ಯುವಕರನ್ನು ಸಂದರ್ಶಿಸಿ, ಅವರ ಹೆಸರುಗಳನ್ನು ಅಂತಿಮಗೊಳಿಸಿ ಬಿಎಸ್ಎಫ್ ಸೇರಿದಂತೆ ವಿವಿಧ ತುಕಡಿಗಳಿಗೆ ದೈಹಿಕ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ನೇಮಕಾತಿ ಬಯಸುವ ಅಭ್ಯರ್ಥಿಗಳಿಗೆ ಕೇವಲ ಎಸ್ಎಸ್ಎಲ್ ಸಿ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ. ಆದರೆ, 2ನೇ ಪಿಯುಸಿ, ಪದವಿ ಪಡೆದ ನೂರಾರು ಜನ ಯುವಕರು ನೇಮಕಾತಿ ಬಯಸಿ ಬಿಎಸ್ಎಫ್ ಸೇರಿದಂತೆ ವಿವಿಧ ಸೇನಾ ತುಕಡಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ, ಆಯ್ಕೆಯಾಗುತ್ತಿದ್ದಾರೆ. ಇದು ಕಾಶ್ಮೀರದ ಯುವಕರ ಪರಿಸ್ಥಿತಿಯ ನೈಜ ಚಿತ್ರಣ.
ಕೋಕರ್ ನಾಗ್ ಪ್ರದೇಶದಿಂದ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಜಾವೇದ್ ಅಹಮದ್ ಹೇಳುವಂತೆ, "ನಾನು ಪದವಿ ಓದಿದ್ದೇನೆ ಯಾವುದೇ ಕೆಲಸ ಸಿಗದಿದ್ದರಿಂದ ಸೇನಾ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದೇನೆ. ನಮ್ಮ ಪ್ರದೇಶದಿಂದಲೇ ನನ್ನಂತೆ ಅನೇಕ ಯುವಕರು ಬಂದಿದ್ದಾರೆ".
"ಈ ಕೆಲಸ ತುಂಬಾ ಕಠಿಣವಾದದ್ದು ಎಂದು ನನಗೂ ತಿಳಿದಿದೆ. ಆದರೆ, ಬೇರೆ ಆಯ್ಕೆಗಳಿಲ್ಲ. ಒಳ್ಳೆಯ ಸಂಬಳ ಸಿಗುತ್ತದೆ. ಇದರಿಂದಾಗಿ ನನ್ನ ತಂದೆಗೆ ನಾನು ಸ್ವಲ್ಪ ಮಟ್ಟಿನ ಸಹಕಾರ ನೀಡದಂತಾಗುತ್ತದೆ" ಎಂದು ಜಾವೇದ್ ತನ್ನ ಮನೆಯ ಪರಿಸ್ಥಿತಿ ಹೇಳಿಕೊಳ್ಳುತ್ತಾನೆ.
ಕಾಶ್ಮೀರಿ ಯುವಕರ ನಿರುದ್ಯೋಗ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ನೇಮಕಾತಿಗಾಗಿ ಸೇರುವಂತೆ ಮಾಡುತ್ತಿದೆ ಎನ್ನುವುದು ಹಿರಿಯ ಅಧಿಕಾರಿಗಳ ಅಭಿಪ್ರಾಯ. ಹೊಸದಾಗಿ ಆಯ್ಕೆಯಾಗುವ ಅಭ್ಯರ್ಥಿಗಳು ಬಿಎಸ್ಎಫ್ ಸೇರಿದಂತೆ ವಿವಿಧ ತುಕಡಿಗಳಲ್ಲಿ ಪ್ರಾರಂಭಿಕವಾಗಿ ಇಪತ್ತು ಸಾವಿರ ರೂ. ಸಂಬಳ ಪಡೆಯಲಿದ್ದಾರೆ.
ಭಾರತ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದ ಯುವಕರ ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಶೇಷ ನೇಮಕಾತಿ ಶಿಬಿರಗಳನ್ನು ಆಯೋಜಸಿ ಸುಮಾರು 5000 ಜನರಿಗೂ ಹೆಚ್ಚಿನ ಯುವಕರನ್ನು ನೇಮಕಾತಿ ಮಾಡಿಕೊಂಡಿದೆ.
ಬಿಎಸ್ಎಫ್ ಹಿರಿಯ ಅಧಿಕಾರಿಗಳು ಹೇಳುವಂತೆ ಕಾಶ್ಮೀರಿ ಯುವಕರು ಕಠಿಣ ಪರಿಶ್ರಮಿಗಳು. ರಾಜಸ್ಥಾನ, ಪಶ್ಚಿಮಬಂಗಾಳದ ಗಡಿಗಳಲ್ಲಿ ಕೆಲವರು ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರಿ ಯುವಕರ ಬಗ್ಗೆ ನಮಗೆ ಹೆಮ್ಮೆಇದೆ ಎನ್ನುತ್ತಾರೆ.












Click it and Unblock the Notifications