ದೆಹಲಿ ವಿಮಾನವೇರಿದ ಬೇಳೂರು ಗೋಪಾಲಕೃಷ್ಣ

ಬೇಳೂರು ಬುಧವಾರ ಅಥವ ಗುರುವಾರ ಬಿಜೆಪಿ ತೊರೆಯುವುದು ಬಹುತೇಕ ಖಚಿತವಾಗಿದೆ. ರಾಜ್ಯದ ಕಾಂಗ್ರೆಸ್ಸಿಗರು ವಲಸಿಗರು ಪಕ್ಷ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂಧನ್ ಮಿಸ್ತ್ರಿ ಜೊತೆ ಚರ್ಚೆ ನಡೆಸಿ ಪಕ್ಷ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಬೇಳೂರು ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ತಾನು ಬಂಗಾರಪ್ಪನವರ ಶಿಷ್ಯ ಎಂದು ಹೇಳಿಕೊಂಡು ಕಾಂಗ್ರೆಸ್ ಸೇರಲು ಬೇಳೂರು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಯೂ ಹರಡಿದೆ. ದೆಹಲಿಯಲ್ಲಿರುವ ರಾಜ್ಯದ ಕಾಂಗ್ರೆಸ್ ಸಚಿವರನ್ನು ಭೇಟಿಮಾಡಿ ಅವರ ಶಿಫಾರಸ್ಸಿನಂತೆ ಕಾಂಗ್ರೆಸ್ ಸೇರಲು ಅವರ ಅವಕಾಶಗಳಿವೆಯೇ ಎಂದು ಬೇಳೂರು ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯವುದು ನಿಶ್ಚಿತವಾದರೆ ಮಾತ್ರ ಬೇಳೂರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಬಿಜೆಪಿ ತೊರೆಯುವುದಾಗಿ ಘೋಷಿಸಿರುವ ಬೇಳೂರು ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರೆ ಬೇರೆ ಪಕ್ಷ ಸೇರುವ ಬಗ್ಗೆಯೂ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮಾಧ್ಯಮಗಳ ಮುಂದೆ ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರು ಅಲ್ಲ ಎಂದಿರುವ ಬೇಳೂರು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಸೇರಲಿದ್ದಾರೆಯೇ ಎಂಬ ಅನುಮಾನವನ್ನು ಅವರ ಆಪ್ತವಲಯದಲ್ಲಿ ಹುಟ್ಟುಹಾಕಿದೆ. ಬುಧವಾರ ಬೆಳಗ್ಗೆ ಅವರು ದೆಹಲಿಯಿಂದ ವಾಪಾಸ್ಸಾಗಲಿದ್ದು, ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರುವ ಸಂಭವವಿದೆ.












Click it and Unblock the Notifications