ರಾಜಕಾರಣಿಗಳ ಬಾಯಿಂದ ಜಿಗಿಯುತ್ತಿವೆ ಪ್ರಾಣಿಗಳು!
ತುಮಕೂರು, ಫೆ.22: ರಾಜಕಾರಣಿಗಳಿಗೂ, ಪ್ರಾಣಿಗಳಿಗೂ ಅನ್ಯೋನ್ಯ ಸಂಬಂಧ. ರಾಜಕಾರಣಿಗಳು ಎಮ್ಮೆಯಂತೆ ದಪ್ಪ ಚರ್ಮದವರು ಎಂದು ಬಣ್ಣಿಸಿ, ಮತದಾರರು ಸಮಾಧಾನಪಟ್ಟುಕೊಳ್ಳುತ್ತಾರೆ. ಆದರೆ ರಾಜಕಾರಣಿಗಳೋ... ಪ್ರಾಣಿಗಳ ಹೆಸರುಗಳನ್ನು ಪರಸ್ಪರ ಆರೋಪಿಸಿಕೊಂಡು ಇದೇ ಮತದಾರರಿಗೆ ಬಿಟ್ಟಿ ಮನರಂಜನೆ ಕೊಡುತ್ತಾರೆ. ತಮ್ಮ ಮಾನಮರ್ಯಾದೆಯನ್ನು ಹರಾಜಿಗಿಡುತ್ತಾರೆ. ಜತೆಗೆ, ಆ ಪ್ರಾಣಿಗಳ ಮಾನವನ್ನೂ ಕಳೆಯುತ್ತಾರೆ.
ಪಾಪ ಆ ಪ್ರಾಣಿಗಳು ಎಷ್ಟು ಬೇಜಾರು ಮಾಡಿಕೊಳ್ಳುತ್ತವೆಯೋ!? ಈ ಅವಿವೇಕಿ ರಾಜಕಾರಣಿಗಳು ಒಬ್ಬರ ಮೇಲೊಬ್ಬರು ಕೆಸೆರೆರಚುವ ಭರದಲ್ಲಿ ನಿಜಕ್ಕೂ ಭಾರಿ ರಾಡಿ ಎಬ್ಬಿಸುತ್ತಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇದು ತಾರಕಕ್ಕೇರುತ್ತದೆ. ತೀರಾ ಇತ್ತೀಚೆಗೆ ಗುಜರಾತ್ ಚುನಾವಣೆ ವೇಳೆ ಹೀಗೆ ಕೋತಿ, ಕಪ್ಪೆಗಳು ಹಾರಿದ್ದವು. ಈಗ ರಾಜ್ಯದಲ್ಲಿ ಚುನಾವಣೆ ಕಾಲಿಡುತ್ತಿದೆ. ಸಹಜವಾಗಿಯೇ ಮತ್ತೆ ಪ್ರಾಣಿಗಳು ಜಿಗಿಯುತ್ತಿವೆ.
ಕುತೂಹಲಕಾರಿಯೆಂದರೆ ಬಾಸ್ಟರ್ಡ್, ಅಕ್ರಮ ಸಂತಾನ, ಗೂಬೆ ಮುಂಡೇದು, ಐರನ್ ಲೆಗ್, ಕಾಮುಕ, ಶನಿ ಸಂತಾನ, ಪೀಡೆ, ಗೂಂಡಾ ಮಂತ್ರಿ ಮುಂತಾದ ಆಣಿಮುತ್ತುಗಳೂ ಈ ರಾಜಕಾರಣಿಗಳ ಬಾಯಿಂದ ಉದುರಿರುವ ಉದಾಹರಣೆಯುಂಟು. ಒಂದಷ್ಟು ಪ್ರಾಣಿ/ರಾಜಕಾರಣಿಗಳನ್ನು ಅವರವರ ಮಾತುಗಳಲ್ಲೇ ಪರಿಚಯಿಸುವುದಾದರೆ...

ಅವರೆಲ್ಲಾ ನಾಯಿ-ನರಿಗಳು
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶಗೌಡ ಹೇಳುವಂತೆ ಬೇರೆ ಪಕ್ಷಗಳಿಗೆ ಜಿಗಿಯುತ್ತಿರುವವರು ಅಂದರೆ ಬಿಜೆಪಿ ಬಿಡುವವರು ನಾಯಿ-ನರಿಗಳಂತೆ! ಹಲವು ಸಚಿವ, ಶಾಸಕರು ತಂಡೋಪತಂಡವಾಗಿ ಪಕ್ಷ ತೊರೆಯುತ್ತಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ, ನಾಯಿ- ನರಿಗಳೆಲ್ಲ ಬಿಜೆಪಿ ಪಕ್ಷ ತೊರೆಯುತ್ತಿವೆ. ಅವರೆಲ್ಲ ಭಿಕಾರಿಗಳು. ನಾನು ಹುಲಿ ನಾನ್ಯಾಕೆ ಬಿಜೆಪಿ ಬಿಡಲಿ ಎಂದಿದ್ದಾರೆ.

ಸದಾನಂದರ ಕಣ್ಣಿಗೆ ಬಿದ್ದ ಕೋತಿ
ಇನ್ನು, ರೆಬೆಲ್ ಮೂಡಿನಲ್ಲಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ದಿಲ್ಲಿಯಲ್ಲಿ ಹೇಳುವಂತೆ ಪಕ್ಷದಿಂದ ಪಕ್ಷಕ್ಕೆ ಹಾರೋ ಕೋತಿ ಚೇಷ್ಟೆಯನ್ನು ತಾವು ಮಾಡೋದಿಲ್ಲ, ಪಕ್ಷವನ್ನು ತ್ಯಜಿಸೋದಿಲ್ಲ, ಪಕ್ಷಾಂತರಿಗಳಿಗೆ ಜನರೇ ಪಾಠ ಕಲಿಸಬೇಕು, ಕಲಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಕ ಮಳೆಗಾಲದ ಕಪ್ಪೆ
ವಾರಣಾಸಿಯಲ್ಲಿ ಕಳೆದ ವರ್ಷ ಕಾಂಗ್ರೆಸ್ ಯುವನಾಯಕಿ ಪ್ರಿಯಾಂಕ ಗಾಂಧಿ ತಾನು 'ಮಳೆಗಾಲದ ಕಪ್ಪೆ' ಅಂತ ಸ್ವತಃ ಹೇಳಿಕೊಂಡಿದ್ದರು. ಮಳೆಗಾಲದ ಕಪ್ಪೆಗೆ ಕೋರಸ್ ಆಗಿ ಅವರ ತಮ್ಮ, ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿ ಅವರು 'ಪ್ರಿಯಾಂಕ (ಬರ್ಸಾತಿ ಮೆಂಡಕ್) ಕಪ್ಪೆಯಾದರೆ ನಾನು ಕೂಡ ಕಪ್ಪೆ. ಯಾಕೆಂದರೆ ನಾನು ಆಕೆಯ ತಮ್ಮ' ಎಂದು ಅಮಾಯಕರಾಗಿ ಅಕ್ಕನನ್ನು ಸಮರ್ಥಿಸಿಕೊಂಡಿದ್ದರು.

ಸದಾನಂದ, ಯಡಿಯೂರಪ್ಪ ಪುಂಡಾನೆಗಳು
ಕಳೆದ ಜುಲೈನಲ್ಲಿ ಶೆಟ್ಟರ್ ಮುಖ್ಯಮಂತ್ರಿ ಪದಗ್ರಹ ಮಾಡುವ ಸಂದರ್ಭದಲ್ಲಿ ಕತ್ಲಾಡುತ್ತಿದ್ದ ಬಿಜೆಪಿ ಮಂದಿಯನ್ನು ಕಂಡು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಾಯಿ ನರಿಗಳ ತರಹ ಕಿತ್ಲಾಡ್ತಿದ್ದಾರೆ ಎಂದು ಕಮಲ ಪಕ್ಷದಲ್ಲಿನ ಕಲಹದ ಬಗ್ಗೆ ಬೆಂಗಳೂರಿನಲ್ಲಿ ವ್ಯಾಖ್ಯಾನ ನೀಡಿದ್ದರು.
ಕಮಲ ಕಲಹಕ್ಕೆ ಕಾರಣೀಭೂತರಾಗಿರುವುದು ಪಕ್ಷದ ನಾಯಕರಾದ ಸದಾನಂದ ಗೌಡ ಮತ್ತು ಯಡಿಯೂರಪ್ಪ... ಇಬ್ಬರೂ ಪುಂಡಾನೆಗಳು (rogues) ಎಂದೂ ಸಿದ್ದರಾಮಯ್ಯ ಹೇಳಿದ್ದರು.

Team ಯಡಿಯೂರಪ್ಪ ಬೀದಿ ನಾಯಿಗಳಂತೆ
ಇನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಅಧಿಕಾರ ತ್ಯಜಿಸಿದ ಸಂದರ್ಭದಲ್ಲಿ ಡಿವಿ ಸದಾನಂದ ಗೌಡರು ತಮ್ಮ ಪುರಾತನ ಮಿತ್ರ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರನ್ನು 'ಬೀದಿ ನಾಯಿಗಳು' ಎಂದು ಜರಿದಿದ್ದರು.

Bunch of animals:
ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕರ್ನಾಟಕದ ರಾಜಕಾರಣಿಗಳು ನಿಜಕ್ಕೂ ನಾಯಿನರಿಗಳ ಥರ ಕಚ್ಚಾಡುತ್ತಾ... ಒಬ್ಬರು ಬೀದಿ ನಾಯಿ ಅಂದಾಗ ಮತ್ತೊಬ್ಬರು ಸಾಕು ನಾಯಿ ಅಂದಿದ್ದರು. ಬಿಜೆಪಿ ಪಕ್ಷದ ಅಂದಿನ ಸಚಿವ ಬಿಜೆ ಪುಟ್ಟಸ್ವಾಮಿ ಅವರು ರಾಜ್ಯದ ಕಾಂಗ್ರೆಸ್ ಮಂದಿಯನ್ನು ಸಾಕು ನಾಯಿ ಅಂದಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯಲ್ಲಿ ಕೆಮ್ಮಿದರೆ ಇಲ್ಲಿಂದಲೇ ಬಾಲ ಅಲ್ಲಾಡಿಸುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರು ಕಾಂಗ್ರೆಸ್ಸಿನ ಸಾಕು ನಾಯಿಗಳು ಎಂದು ಸಹಕಾರ ಖಾತೆಯ ಸಚಿವ ಮಾನ್ಯ ಬಿಜೆಪಿ ಪುಟ್ಟಸ್ವಾಮಿ ಅವರು ವ್ಯಂಗ್ಯವಾಡಿದ್ದರು.

ಸಿಟಿ ರವಿ ಹೇಳಿದ್ದ ಕತ್ತೆ ಕಥೆ
ಶಿಕ್ಷಣ ಸಚಿವ ಸಿಟಿ ರವಿ ಸರ್ ನೀತಿ ಕಥೆಯೊಂದನ್ನು ಬೋಧಿಸುತ್ತಾ.... ಯಡಿಯೂರಪ್ಪ ಅವರನ್ನು ಕತ್ತೆ ಎಂದು ಸಂಭೋಧಿಸಿದ್ದರು. ಮುಂದೆ ಆ ಆರೋಪವನ್ನು ಯಡಿಯೂರಪ್ಪ ಬೆಂಬಲಿಗರಿಗೂ ಹೊರಿಸಿದರು.
ಸಿಟಿ ಹೇಳಿದ ಕಥೆ ಹೀಗಿತ್ತು: 'ಒಂದೂರಲ್ಲಿ ಒಂದು ಕತ್ತೆಯ ಮೇಲೆ ದೇವರ ಮೂರ್ತಿಯನ್ನು ಇಟ್ಟು, ಪ್ರತಿದಿನ ಜನ ಅದಕ್ಕೆ ಪೂಜೆ ಮಾಡುತ್ತಿದ್ದರು. ಆದರೆ, ಕತ್ತೆ ಜನರು ತನಗೇ ಪೂಜೆ ಮಾಡುತ್ತಿದ್ದಾರೆ ಎಂದು ಭಾವಿಸಿ ಅಹಂಕಾರದಿಂದ ವರ್ತಿಸುತಿತ್ತು'.

ಕೋತಿಯಾಗಿದ್ದ ಮೋದಿ:
ಅಹಮದಾಬಾದಿನಲ್ಲಿ ಚುನಾವಣೆ ಸಂದರ್ಭದಲ್ಲಿ (ನ.9) ಪುಣ್ಯಾತ್ಮನೊಬ್ಬ ಗುಜರಾತಿನ ಮುಖ್ಯಮಂತ್ರಿ ನರೆಂದ್ರ ಮೋದಿಯನ್ನು ಕೋತಿಗೆ ಹೋಲಿಸಿ, ಕೃತಾರ್ಥನಾದೆ ಎಂದಿದ್ದರು.ಗುಜರಾತಿನ ಕಾಂಗ್ರೆಸ್ ಮುಖ್ಯಸ್ಥ ಅರ್ಜುನ್ ಮೋದ್ವಾಡಿಯಾ ಅವರು ಮುಖ್ಯಮಂತ್ರಿ ಮೋದಿಯನ್ನು ಕೋತಿ ಎಂದು ಜರಿದಿದ್ದರು.
ಮೋದ್ವಾಡಿಯಾ ಅಂದು ಹೇಳಿದ್ದೇನೆಂದರೆ- ಅವರು (ಮೋದಿ) ಮಂಗನಿದ್ದಂತೆ. ಮರದ ಮೇಲೆ ಕುಳಿತ ಅದು ಕೆಳಗಿಳಿಯದೆಯೇ ಕಾಡಿನ ರಾಜ ಸಿಂಹದ (ಪ್ರಧಾನಿ ಸಿಂಗ್ ) ವಿರುದ್ಧ ಸುಮ್ನೇ ಸುಮ್ನೇ ಕೆಣಕುತ್ತಾ ಗುರ್ ಗುಟ್ಟುತ್ತದೆ. ಸಿಂಹ ಮರ ಏರುವುದಿಲ್ಲ. ಆದರೆ ಮಂಗ ಒಮ್ಮೆಯದರೂ ಕೆಳಕ್ಕಿಳಿಯಲೇ ಬೇಕು, ಅಲ್ವಾ? ಎಂದು ಪ್ರಶ್ನಿಸಿದ್ದರು.

ಕೋತಿಯಾಗಿದ್ದ ಮೋದಿ ಮುಂದೆ ಇಲಿಯೂ
(ಅಹಮದಾಬಾದ್, ನ. 13) ಅರ್ಜುನ್ ಮೋದ್ವಾಡಿಯಾ ಮುಖ್ಯಮಂತ್ರಿ ಮೋದಿಯನ್ನು ಕೋತಿ ಎಂದು ಜರಿಯುತ್ತಿದ್ದಂತೆ ಅವರದೇ ಕಾಂಗ್ರೆಸ್ಸಿನ ಸಂಸದ ಹುಸೇನ್ ದಳವಿ ಮೋದಿಯನ್ನು ಇಲಿಗೆ ಹೋಲಿಸಿ, ಧನ್ಯತಾ ಭಾವ ಅನುಭವಿಸಿದ್ದರು. ಅದೇ ಸಂದರ್ಭದಲ್ಲಿ ಪುರಾತನ ಪಕ್ಷದ ಪುರಾತನ ನಾಯಕ ಮಣಿಶಂಕರ್ ಅಯ್ಯರ್ ಅವರು ಮೋದಿಯನ್ನು 'ಲಹು ಪುರುಷ್' ಅಂದರೆ ರಕ್ತಪಿಪಾಸು ಎಂದು ಬಣ್ಣಿಸಿ, ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿದ್ದಾರೆ.












Click it and Unblock the Notifications