ಭಾರತ್ ಬಂದ್ ಹುಚ್ಚಾಟಕ್ಕೆ 20 ಸಾವಿರ ಕೋಟಿ ನಷ್ಟ

ಸುಮಾರು 15000-20000 ಕೋಟಿ ರೂ. ನಷ್ಟ ಉಂಟಾಗಲಿದ್ದು, ಇದರ ಹೊರೆ ಮತ್ತೊಮ್ಮೆ ಜನ ಸಾಮಾನ್ಯರು, ಕಾರ್ಮಿಕ ವರ್ಗವೇ ಹೊರಬೇಕಾಗುತ್ತದೆ ಹೀಗಾಗಿ ಮುಷ್ಕರ ಕೈಬಿಟ್ಟರೆ ಒಳ್ಳೆಯದು ಎಂದು ಕಾರ್ಮಿಕ ಸಂಘಟನೆಗಳಿಗೆ ಅಸ್ಸೊಚಾಮ್ ಮನವಿ ಮಾಡಿದೆ.
ಎರಡು ದಿನಗಳ ಮುಷ್ಕರದಿಂದಾಗಿ ಭಾರತದ ದೈನಂದಿನ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದಲ್ಲಿ ಶೇ.30-40ರಷ್ಟು ಕುಸಿತ ಉಂಟಾಗಲಿದೆಯೆಂದು ಅಸ್ಸೊಚಾಮ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
'ಭಾರತದ ಆರ್ಥಿಕತೆಯು ಕುಸಿದಿದ್ದು, ಈ ಮುಷ್ಕರದಿಂದ ಉಂಟಾಗುವ ದುಷ್ಪರಿಣಾಮವನ್ನು ಸಹಿಸಲು ಅದಕ್ಕೆ ಸಾಧ್ಯವಾಗದೆಂದು'ಅಸ್ಸೊಚಾಮ್ ಅಧ್ಯಕ್ಷ ರಾಜ್‌ಕುಮಾರ್ ಧೂತ್ ಹೇಳಿದ್ದಾರೆ. ಈ ಮುಷ್ಕರದಿಂದಾಗಿ ಅವಶ್ಯಕ ಸಾಮಗ್ರಿಗಳ ಪೂರೈಕೆಗೆ ಅಡ್ಡಿಯುಂಟಾಗುವುದರಿಂದ ಬೆಲೆ ಏರಿಕೆ ಸಮಸ್ಯೆಯು ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ಧೂತ್ ಆತಂಕ ವ್ಯಕ್ತಪಡಿಸಿದ್ದಾರೆ.
ಬಂದ್ ನಿಂದಾಗಿ ಸೇವಾಕ್ಷೇತ್ರಕ್ಕೆ ಅಡ್ಡಿ ಉಂಟಾಗಲಿದೆ. ಬ್ಯಾಂಕಿಂಗ್, ಫೈನಾನ್ಸ್, ಪ್ರವಾಸೋದ್ಯಮ, ಸಾರಿಗೆ..ಇತ್ಯಾದಿ ಕ್ಷೇತ್ರಗಳು ದೇಶದ ಆಂತರಿಕ ಉತ್ಪನ್ನ ವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಧೂತ್ ಹೇಳಿದರು.
ದೇಶದ ಐದು ಪ್ರಮುಖ ಕಾರ್ಮಿಕ ಒಕ್ಕೂಟಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ. ಮಹಾರಾಷ್ಟ್ರ, ಕೋಲ್ಕತ್ತಾದಲ್ಲಿ ಬಂದ್ ತೀವ್ರವಾಗಿದ್ದು, ಇತರೆಡೆ ಸಾಧಾರಣ ಮಟ್ಟದಲ್ಲಿದೆ. ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಮುಂತಾದ ಸಮಸ್ಯೆಗಳ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿರೋಧಿಸಿ ಬಂದ್ ಆಚರಿಸಲಾಗುತ್ತಿದೆ.
ಸರ್ಕಾರದ ನಿಯಮಗಳು ಹಣದುಬ್ಬರ ಹಾಗೂ ಆರ್ಥಿಕ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಇದು ಸಹಿಸಲು ಸಾಧ್ಯವಿಲ್ಲ. ಸರ್ಕಾರದ ವಿರುದ್ಧ ಜನ ಸ್ವಯಂ ಪ್ರೇರಣೆಯಿಂದ ಬಂದ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕಾರ್ಮಿಕ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ರಾಮಕೃಷ್ಣ ಪಾಂಡಾ ಅಭಿಪ್ರಾಯಪಟ್ಟಿದ್ದಾರೆ.
ಬಂದ್ ನಡುವೆಯೂ ಸಾರ್ವಜನಿಕರಿಗೆ ಒಂದಷ್ಟು ರಿಲೀಫ್ ಸಿಕ್ಕಿದೆ. ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ಹೋಟೆಲ್ ಮಾಲೀಕರ ಸಂಘ, ವಿತರಕರ ಸಂಘ, ಚಿತ್ರಮಂದಿರಗಳು, ಪೆಟ್ರೋಲ್ ಬಂಕ್, ಗ್ಯಾಸ್ ಸಿಲೀಂಡರ್ ವಿತರಕರು, ಕೇಬಲ್ ಆಪರೇಟರ್ಸ್, ಚಿನ್ನ ಬೆಳ್ಳಿ ಮಾರಾಟಗಾರರ ಸಂಗ, ವಕೀಲರ ಸಂಘಗಳು ಬಂದ್ ಬೆಂಬಲಿಸುತ್ತಿಲ್ಲ. ಜೊತೆಗೆ ಹಲವೆಡೆ ಸಾರ್ವಜನಿಕ ಸಾರಿಗೆ ಕೂಡಾ ಸರಾಗವಾಗಿ ಸಾಗಿದೆ. ಹಾಗಾಗಿ ದೈನಂದಿನ ವ್ಯವಹಾರಕ್ಕೆ ಅಡ್ಡಿ ಉಂಟಾಗಿಲ್ಲ.












Click it and Unblock the Notifications