ಶೋಭಾ ಎಫೆಕ್ಟ್: ಸಿದ್ಲಿಂಗ ಸ್ವಾಮಿ ಈಗ ರೆಬೆಲ್ ಸ್ಟಾರ್

ಕಾಪು ಸಿದ್ಲಿಂಗ ಸ್ವಾಮಿ ಈ ಬಾರಿ ಈಗಾಗಲೇ ವರುಣಾ ಕ್ಷೇತ್ರದ 'ಸ್ವಯಂಘೋಷಿತ ಶಾಸಕ' ಎನ್ನುವಷ್ಟರ ಮಟ್ಟಿಗೆ ಮೈಸೂರು ಭಾಗದಲ್ಲಿ ಮಾತುಗಳು ಕೇಳಿಬರುತ್ತಿವೆ. ಇನ್ನು ಇಲ್ಲೊಂದು ವಿಷಯ ಜ್ಞಾಪಿಸುವುದಾದರೆ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿದ್ದವರು. ಜತೆಗೆ, ಆಗಲೇ ಹೇಳಿದಂತೆ ಇವರಿಬ್ಬರೂ ಯಡಿಯೂರಪ್ಪಗೆ ಎರಡು ಕಣ್ಣು ಇದ್ದಂತೆ. ಪರಿಸ್ಥಿತಿ ಹೀಗಿರುವಾಗ...
ಬದಲಾದ ಕಾಲಮಾನದಲ್ಲಿ ಇಬ್ಬರೂ ಪರಸ್ಪರ ಯುದ್ಧಕ್ಕೆ ನಿಂತಿದ್ದಾರೆ ಎಂಬುದು ತಾಜಾ ಸುದ್ದಿ. ಮೈಸೂರು ಭಾಗದ ವಿಷಯದಲ್ಲೂ ಶೋಭಾ ಕೈಯಾಡಿಸುತ್ತಿದ್ದಾರೆ. ಇದು ತನಗೆ ಸಹಿಸಲಾಗುತ್ತಿಲ್ಲ ಎಂಬುದು ಸಿದ್ಲಿಂಗು ಮುಖ್ಯ ಕೊರಗು. ಹಾಗೆ ನೋಡಿದರೆ ಇದು ಒಬ್ಬ ಸಿದ್ಲಿಂಗು ಕೂರಗಲ್ಲ.
ಕನಿಷ್ಠ ಡಜನ್ ಮಂದಿ ಶಾಸಕ/ಸಚಿವರ ಆರ್ತನಾದವೂ ಆಗಿದೆ. ಕೆಜೆಪಿಗೆ ಸೇರಿದರೆ ಶೋಭಾ ಕೈಕೆಳಗೆ ಕೆಲಸ ಮಾಡಬೇಕಾದೀತು ಎಂಬುದು ಈ ನಾಯಕರ ಅಳಲು. ಹಾಗಾಗಿಯೇ ಇವರ್ಯಾರೂ ಯಡಿಯೂರಪ್ಪ ಅವರತ್ತ ಸುಳಿದಾಡುತ್ತಿಲ್ಲ. ಸಿದ್ಲಿಂಗೂದೂ ಈಗ ಅದೇ ಪರಿಸ್ಥಿತಿ.
ಕಳೆದ ವಾರ ಸಿದ್ಲಿಂಗಸ್ವಾಮಿ ರೆಬೆಲ್: ಸನ್ಮಾನ್ಯ ಯಡಿಯೂರಪ್ಪನವರು ಇತ್ತೀಚೆಗೆ 15 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮೈಸೂರು-ಚಾಮರಾಜ ನಗರ ಜಿಲ್ಲೆಗಳ ಉಸ್ತುವಾರಿಯನ್ನು ಶೋಭಾ ಮೇಡಂಗೆ ವಹಿಸಿದ್ದಾರೆ. ಇದು ಸಹಜವಾಗಿಯೇ ಸಿದ್ಲಿಂಗುರನ್ನು ರೊಚ್ಚಿಗೆಬ್ಬಿಸಿದೆ.
ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ತನಗೇ ನೀಡುವುದಾಗಿ ಈ ಹಿಂದೆ ಯಡಿಯೂರಪ್ಪ ಹೇಳಿದ್ದರು. ಆದರೆ ಈಗ ಅವರಿಗೆ ಜಾಣ ಮರೆವು ಕಾಣಿಸಿಕೊಂಡಿದೆ ಎಂಬುದು ಸಿದ್ಲಿಂಗು ದೂರು. ಮೊನ್ನೆ ಕಾವೇರಿ ಹೆಸರಿನಲ್ಲಿ ಯಡಿಯೂರಪ್ಪ ಪಾದಯಾತ್ರೆ ಕೈಗೊಂಡಾಗ ಶೋಭಾ ಹೊಡೆತ ಹೇಗಿತ್ತು ಎಂಬುದು ಸಿದ್ಲಿಂಗು ಅನುಭವಕ್ಕೆ ಬಂದಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಶೋಭಾ ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಅರಿಯಲು ಸಿದ್ಲಿಂಗುಗೆ ಹೆಚ್ಚು ಕಾಲ ಹಿಡಿಸಿಲ್ಲ. ತನ್ನ ಎದುರಾಳಿ ಮಲ್ಲಿಕಾರ್ಜುನಪ್ಪಗೆ ಶೋಭಾ ಮಣೆ ಹಾಕಿರುವುದು ಸಿದ್ಲಿಂಗುಗೆ ಸಹಿಸಲಾಗುತ್ತಿಲ್ಲ. ಇದು ಚಾಮರಾಜನಗರದ ಸ್ಥಳೀಯ ನಾಯಕರ ಆಶಯಕ್ಕೆ ವಿರುದ್ಧವಾಗಿದೆ ಎಂಬುದು ಸಿದ್ಲಿಂಗು ವಾದ.
ಈ ಕುರಿತಾಗಿ ಕಳೆದ ವಾರಾಂತ್ಯ ಸಿದ್ಲಿಂಗು ಮತ್ತೆ ಶೋಭಾ ಮಧ್ಯೆ ಜಟಾಪಟಿಯಾಗಿದೆ ಎಂದು ಮೂಲಗಳು ಪಿಸುಗುಟ್ಟುತ್ತಿವೆ. ಶೋಭಾರನ್ನು ತಮ್ಮ ಜಿಲ್ಲೆಗಳ ಉಸ್ತುವಾರಿಯಿಂದ ಹಿಂದಕ್ಕೆ ಪಡೆಯುವುದು ಮತ್ತು ಮಲ್ಲಿಕಾರ್ಜುನಪ್ಪರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿರುವುದು ಸಿದ್ಲಿಂಗು ಈಗ ಯಡೊಯೂರಪ್ಪ ಮುಂದಿಟ್ಟಿರುವ ಎರಡು ಪ್ರಮುಖ ಬೇಡಿಕೆಗಳಾಗಿವೆ.
ಇಲ್ಲಾಂದ್ರೆ ರಾಮುಲು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವುದಾಗಿ ಸಿದ್ಲಿಂಗು ಗುಟುರು ಹಾಕಿದ್ದಾರೆ. ಹಾಗೇನಾದರೂ ಆದರೆ ವರುಣಾ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಸ್ವಲ್ಪ ನಿರಾಳರಾಗಬಹುದು. ಮೈಸೂರಿನ ಮಾಜಿ ಎಸಿಪಿ ಚಲುವರಾಜು ಅವರನ್ನು ಜೆಡಿಎಸ್ ನಿಂದ ಕಣಕ್ಕಿಳಿಸುವ ದೇವೇಗೌಡರ ಆಟಕ್ಕೂ ಕಳೆಕಟ್ಟುತ್ತದೆ.












Click it and Unblock the Notifications