ಗುಜರಾತಿನ ಮಧುಸೂದನ ಮಿಸ್ತ್ರಿ ಕಾಲ ಮುಗಿಯಿತೇ?

ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿಗೆ ಕರ್ನಾಟಕದ ಚುನಾವಣೆಗಳು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಕಳೆದ ವಾರ ಕರೆದಿದ್ದ ರಾಜ್ಯ ನಾಯಕರ ಸಭೆಯಲ್ಲಿ ಪಕ್ಷದ ಮುಖಂಡರನ್ನು ಸರಿಯಾಗಿ 'ವಿಚಾರಿಸಿಕೊಂಡಿದ್ದಾರೆ' ಎನ್ನಲಾಗಿದೆ.
'ಅದರಲ್ಲೂ 2 ವರ್ಷಗಳಿಂದ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಮಧುಸೂದನ ದೇವರಂ ಮಿಸ್ತ್ರಿ ಹೊಣೆಗಾರಿಕೆ ಬಗ್ಗೆ ಅಸಮಾಧಾನಗೊಂಡಿದ್ದು, ಅವರನ್ನು ಬದಲಾಯಿಸುವ ಮಾತು ಕೇಳಿಬಂದಿದೆ.
ಮುಖ್ಯವಾಗಿ ಹಿರಿಯರಾದ ಮಧುಸೂದನ ಮಿಸ್ತ್ರಿಗೆ ಪಕ್ಷದ ಅನೇಕ ನಾಯಕರು ಗೌರವ ಕೊಡುತ್ತಿಲ್ಲ. ಇನ್ನು ನಾಯಕರಿಂದ ಕೆಲಸ ತೆಗಿಸುವ ಚಾಕಚಕ್ಯತೆಯೂ ಅವರಲ್ಲಿಲ್ಲ. ಮುಸ್ಲಿಂ ನಾಯಕರಿಗೆ ಮತ್ತು ಸಿದ್ದರಾಮಯ್ಯ, ಶಾಮನೂರು ಶಿವಶಂಕರಪ್ಪ ಗುಂಪಿಗೆ ಮಿಸ್ತ್ರಿ ಪಸಂದಾಗಿಲ್ಲ ಎಂಬುದು ಮಿಸ್ತ್ರಿ ವಿರುದ್ಧ ಕೆಲಸ ಮಾಡುತ್ತಿರುವ ಪ್ರಮುಖ ಅಂಶಗಳು. ಎಲ್ಲಕ್ಕಿಂತ ಮುಖ್ಯವಾಗಿ ಮಧುಸೂದನ ಮಿಸ್ತ್ರಿ ಅವರು ಪಕ್ಷದಲ್ಲಿ ಪ್ರಧಾನ ಹುದ್ದೆಯಲ್ಲಿದ್ದರೂ ರಾಜ್ಯದಲ್ಲಿ ಯಾವೊಬ್ಬರಿಗೂ ಅವರ ಬಗ್ಗೆ ಹೆದರಿಕೆಯೇ ಇಲ್ಲವಾಗಿದೆ.
ಮಿಸ್ತ್ತಿಹೋಗಿ ಗುಲಾಂ ನಭಿ ಬರ್ತಾರಾ?: ಇದನ್ನು ಮನಗಂಡಿರುವ ರಾಹುಲ್ ಗಾಂಧಿ ವರ್ಚಸ್ವಿ ನಾಯಕ, ಕಾಶ್ಮೀರದ ಗುಲಾಮ್ ನಬಿ ಅಜಾದ್ ಅವರ ಹೆಗಲಿಗೆ ಮತ್ತೆ ಕರ್ನಾಟಕ ಭಾರವನ್ನು ಹೊರಿಸುವ ಬಗ್ಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಇನ್ನು ಚುನಾವಣೆಗಳು ಸಮೀಪಿಸುತ್ತಿದ್ದು ಈ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಹತ್ತಾರು ವ್ಯತಿರಿಕ್ತ ಪರಿಸ್ಥಿತಿಗಳು ಉದ್ಭವವಾಗುವುದು ದಿಟ. ಅದನ್ನು ದಿಟ್ಟವಾಗಿ ನಿಭಾಯಿಸಬಲ್ಲ ಚಾಕಚಕ್ಯತೆ ಮಿಸ್ತ್ರಿಗೆ ಇಲ್ಲವಾಗಿದ್ದು, ನಬಿಗೆ ಆ ಸಾಮರ್ಥ್ಯವಿದೆ ಎಂಬುದು ರಾಹುಲ್ ನಂಬಿಕೆಯಾಗಿದೆ.
ಯಾರೀ ಮಿಸ್ತ್ತಿ?: ಮಧುಸೂದನ ದೇವರಂ ಮಿಸ್ತ್ರಿ 2011 ರ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಲಕ್ಷದ್ವೀಪ, ಕೇರಳ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಕಾಂಗ್ರಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ನೇಮಕ.
ಜತೆಗೆ AICC ಪ್ರಧಾನ ಕಾರ್ಯದರ್ಶಿಯೂ ಹೌದು. ಅಹಮದ್ ಪಟೇಲ್ ನಂತರ ಗುಜರಾತ್ ಕಾಂಗ್ರೆಸಿಗೆ ಸಿಕ್ಕ ದೊಡ್ಡ ಮನ್ನಣೆ ಇದಾಗಿತ್ತು. 68 ವರ್ಷದ ಮಧುಸೂದನ ಮಿಸ್ತ್ರಿ ಗುಜರಾತಿನ ಸಬರಕಾಂತಾ ಕ್ಷೇತ್ರದ ಮಾಜಿ ಸಂಸದ, ಹಾಲಿ ರಾಜ್ಯಸಭೆ ಸದಸ್ಯ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚೀಫ್ ವಿಪ್.












Click it and Unblock the Notifications