ಹೆಚ್ಚುಸ್ಥಾನ ಗೆಲ್ಲಿಸಿ ಕಾಂಗ್ರೆಸ್ ಟಿಕೆಟ್ ಪಡೆಯಿರಿ!

ಮಿನಿ ಮತ ಸಮರ ಎಂದು ಪರಿಗಣಿಸಲಾಗಿರುವ ನಗರ ಸ್ಥಳೀಯ ಸಂಸ್ಥಗಳ ಚುನಾವಣೆ ಎದುರಿಸಲು ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳು ಮತ್ತು ಚುನಾವಣಾ ವೀಕ್ಷಕರ ಸಭೆಯಲ್ಲಿ ಇಂತಹದ್ದೊಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಹೈಕಮಾಂಡ್ ಬಳಿ ಲಾಬಿ ಮಾಡಿಕೊಂಡು ಕಾಲ ಕಳೆದರೆ ಅವಕಾಶ ವಂಚಿತರಾಗುತ್ತೀರಿ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬನ್ನಿ ವಿಧಾನಸಭಾ ಚುನಾವಣೆಯ ಟಿಕೆಟ್ ಪಡೆಯಿರಿ ಎಂದು ನಾಯಕರಿಗೆ ಸಭೆಯಲ್ಲಿ ಸ್ಪಷ್ಟ ಸಂದೇಶ ನೀಡಲಾಗಿದೆ.
ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಟಿಕೆಟ್ ನೀಡಲು ಸ್ಥಳೀಯ ಜಿಲ್ಲಾ, ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶಾಸಕರು, ಮಾಜಿ ಶಾಸಕರು, 2008 ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಈ ಸಮಿತಿಯಲ್ಲಿರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕ್ರಿಮಿನಲ್ ಹಿನ್ನೆಲೆ ಉಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂದು ತಿಳಿಸಿದರು. ಕೇಂದ್ರ ಸರ್ಕಾರದಿಂದ ಬಂದ ಸಾವಿರಾರು ಕೋಟಿ ರೂ.ಗಳ ಹಣವನ್ನು ಸರಿಯಾಗಿ ಬಳಸದ ರಾಜ್ಯ ಸರ್ಕಾರದ ವೈಫಲ್ಯವೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ಮುಖ್ಯ ವಿಷಯ ಎಂದು ತೀರ್ಮಾನಿಸಲಾಯಿತು.
ಹಿರಿಯ ಮುಖಂಡರಾದ ಸಸೀರ್ ಅಹಮದ್, ವೀರಣ್ಣ ಮತ್ತಿಕಟ್ಟಿ, ಮೋಹನ್ ರಾಜ್, ಎ.ಕೃಷ್ಣಪ್ಪ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದ ಸಭೆಯಲ್ಲಿ, ಪ್ರತಿ ಹಿರಿಯ ಮುಖಂಡರನ್ನು ಅವರ ಉರಿನ ಉಸ್ತುವಾರಿ ಸದಸ್ಯರನ್ನಾಗಿ ನೇಮಿಸಲಾಯಿತು. ಟಿಕೆಟ್ ಹಂಚಿಕೆಯಿಂದ ಎಲ್ಲಾ ಜವಾಬ್ದಾರಿ ಅವರದ್ದಾಗಿರುತ್ತದೆ ಎಂದು ಆದೇಶಿಸಲಾಯಿತು.












Click it and Unblock the Notifications