ಯಡಿಯೂರಪ್ಪಗೆ ಮತ್ತೆ ಲೋಕಾಯುಕ್ತ ಭೀತಿ

2010ರಲ್ಲಿ ನಡೆದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿಯಲ್ಲಿ ಅಕ್ರಮವಾಗಿ ಭೂಮಿ ಡಿನೋಟಿಫಿಕೇಷನ್ ನಡೆಸಲಾಗಿದೆ ಎಂದು ಶನಿವಾರ (ಫೆ.16) ದೂರು ಸಲ್ಲಿಸಲಾಗಿದೆ.
ಸುಮಾರು 5 ಎಕರೆ ಜಮೀನು ಅಕ್ರಮಕ್ಕೆ ಸಂಬಂಧಿಸಿದಂತೆ ಹುಣಸೂರು ಕೆ ಚಂದ್ರಶೇಖರ್ ಎಂಬುವರು ಖಾಸಗಿ ದೂರು ಸಲ್ಲಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಸಂಸದ ಬಸವರಾಜ್, ನಿಪ್ಪಾಣಿ ಶಾಸಕ ಕಾಕಾ ಸಾಹೇಬ್ ಪಾಂಡುರಂಗ ಪಾಟೀಲ್ ಸೇರಿದಂತೆ ಐವರು ಆರೋಪಿಗಳನ್ನು ದೂರಿನಲ್ಲಿ ಸೇರಿಸಲಾಗಿದೆ.
ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ದೂರನ್ನು ಸ್ವೀಕರಿಸಿರುವ ಲೋಕಾಯುಕ್ತ ವಿಶೇಷ ನ್ಯಾ. ಸುಧೀಂದ್ರ ರಾವ್ ಅವರು, ಮುಂದಿನ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿದ್ದಾರೆ.
ಏನಿದು ಪ್ರಕರಣ: ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿಯ ವಾರ್ಡ್ ನಂ 98, ಸರ್ವೇ ನಂ 251ರಲ್ಲಿ ಸಾರ್ವಜನಿಕ ಆಸ್ಪತ್ರೆ, ಪಾರ್ಕ್ ಮತ್ತು ಪೊಲೀಸ್ ಠಾಣೆಗಾಗಿ ಮೀಸಲಿಟ್ಟಿದ್ದ 5 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ.
ಹಿಂದಿನ ಮೂವರು ಸಿಎಂಗಳು ಬಿಡಿಎ ಪರವಾಗಿ ಡಿನೋಟಿಫಿಕೇಶನ್ ಮಾಡಿ ಎಂದಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗೆ 'ನೆರವಾಗಲು' ಮುಖ್ಯಮಂತ್ರಿ ಯಡಿಯೂರಪ್ಪ ಅದನ್ನು ಬಿಡಿಎ ಪರ ಭೂಸ್ವಾಧೀನ ಪ್ರಕ್ರಿಯೆಗೊಳಪಡಿಸದೆ, ಅಪರಾಧವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
1994ರಲ್ಲಿ ಮೊದಲಿಗೆ 6 ಎಕರೆ 16 ಗುಂಟೆ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಂಡು ನಿವೇಶನದ ಅಭಿವೃದ್ಧಿಗಾಗಿ 30 ಲಕ್ಷ ರೂ. ವ್ಯಯಿಸಿದೆ. ಆ ನಂತರ ಅದೇ ವರ್ಷ ರತ್ಮಮ್ಮ ಮತ್ತು ಆನಂದ್ ಎಂಬವರು ಶಾಲೆ ನಿರ್ಮಾಣಕ್ಕಾಗಿ ಈ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂದು ಸಲ್ಲಿಸಿದ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಜೆಎಚ್ ಪಟೇಲ್, ಎಸ್ಎಂ ಕೃಷ್ಣ, ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಬಳಿಗೆ ಬಂದ ಪ್ರಸ್ತಾವನೆಯನ್ನು ಮೂರೂ ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.
ನಂತರ ಎಟಿ ರಾಮಸ್ವಾಮಿ ಸಮಿತಿ ಸರಕಾರಕ್ಕೆ ಸಲ್ಲಿಸಿದ ವರದಿಯನ್ವಯ ಸಿಟಿ ಸಿವಿಲ್ ನ್ಯಾಯಾಲಯ ಮೂಲ ದಾವೆ ಸಂಖ್ಯೆ: 4377/2008, 4378/2008ರ ದಾವೆಗಳ ಮೇಲೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ತಾತ್ಕಾಲಿಕ ಆದೇಶವನ್ನು ನೀಡಿದೆ. ನಂತರವೂ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯಾಗಿದ್ದ ಯಡಯೂರಪ್ಪ ಬಿಡಿಎ ಕಮೀಷನರ್ ಆಗಿದ್ದ ಸಿದ್ದಯ್ಯ ನೀಡಿದ ಎಲ್ಲ ಸೂಚನೆ, ಎಚ್ಚರಿಕೆಗಳನ್ನೂ ತಿರಸ್ಕರಿಸಿ 12-1-2010ರಂದು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಸೂಚಿಸಿದ್ದಾರೆ ಎಂದು ದೂರಲಾಗಿದೆ.
ಈ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿರುವುದರ ಹಿಂದೆ ಆರ್ ಅಶೋಕ್, ಶೋಭಾ ಕರಂದ್ಲಾಜೆ, ರಾಜಾರಾಜೇಶ್ವರಿ ನಗರದ ಶಾಸಕ ಶ್ರೀನಿವಾಸ್ ಮತ್ತಿತರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವಿದೆ ಎಂದೂ ಅವರು ಆರೋಪಿಸಿದ್ದಾರೆ.












Click it and Unblock the Notifications