ಗಂಡನಿಗೆ ಕ್ಯಾನ್ಸರ್, ಮಕ್ಕಳ ಕೊಂದು ಗೃಹಿಣಿ ನೇಣು

ಶಿರಾದ ಬಾಲಾಜಿ ನಗರದಲ್ಲಿ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಶರಣಾಗುವ ಮುನ್ನ ಮೈಸೂರಿನ ಮೂಲದ ಸ್ಮಿತಾ ಮರಣಪತ್ರ ಬರೆದಿಟ್ಟು ಸಾವಿಗೀಡಾಗಿದ್ದಾರೆ. ಗಂಡ ಭದ್ರೇಶ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ತಿಳಿದುಬಂದ ಕಾರಣ ಸಾವಿಗೆ ಮೊರೆಹೋಗುತ್ತಿರುವುದಾಗಿ ಅವರು ಬರೆದಿದ್ದಾರೆ.
ಮೊದಲು 5 ವರ್ಷದ ಮಗಳು ಸಾನಿಕಾ ಮತ್ತು 18 ತಿಂಗಳ ಮಗ ಸುಚಿತ್‌ಗೆ ವಿಷ ಉಣ್ಣಿಸಿ ಸಾಯಿಸಿದ್ದಾರೆ ಸ್ಮಿತಾ, ನಂತರ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ನಡೆದಾಗ ಹೆಚ್ಚಿನ ಚಿಕಿತ್ಸೆಗೆಂದು ಗಂಡ ಭದ್ರೇಶ್ ಹೈದರಾಬಾದ್‌ಗೆ ತೆರಳಿದ್ದರು.
ತೀವ್ರ ಆಘಾತಕ್ಕೀಡಾಗಿರುವ ಭದ್ರೇಶ್ ಹೈದರಾಬಾದ್‌ನಿಂದ ವಾಪಸ್ ಬರುತ್ತಿದ್ದಾರೆ. ಮೈಸೂರಿನಲ್ಲಿರುವ ಸ್ಮಿತಾಳ ಸಂಬಂಧಿಕರಿಗೆ ಶವಗಳನ್ನು ನೀಡಲು ನಿರ್ಧರಿಸಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತಿದೆ.
ಒಂದು ಮಾಹಿತಿಯ ಪ್ರಕಾರ, ಕ್ಯಾನ್ಸರ್ ಇರುವುದನ್ನು ಗಂಡ ಮುಚ್ಚಿಟ್ಟಿದ್ದರಿಂದ ಸ್ಮಿತಾ ತೀವ್ರವಾಗಿ ನೊಂದಿದ್ದಳು. ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆತ ರೋಗಮುಕ್ತನಾಗುವ ಭರವಸೆ ನೀಡಿದ್ದರೂ ಆಕೆ ತೀವ್ರ ಆಘಾತಕ್ಕೊಳಗಾಗಿದ್ದಳು ಮತ್ತು ಗಂಡ ಹೆಚ್ಚು ಬದುಕಲಾರ ಎಂಬ ತೀರ್ಮಾನಕ್ಕೆ ಬಂದಿದ್ದಳು.
ಕ್ಯಾನ್ಸರ್ ರೋಗಿಗಳು ಓದಲೇಬೇಕಾದ ಪುಸ್ತಕ : ಕ್ಯಾನ್ಸರನ್ನು ಗೆದ್ದಿರುವ, ಅದರ ಜೊತೆಗೆ ಸಹಜವಾಗಿ ಬದುಕುತ್ತಿರುವ ಕೆಲವರ ಬಗೆಗೆ ಬರೆದಿರುವ, ಕ್ಯಾನ್ಸರ್ ನನ್ನು 'ಅಪ್ಪಿ'ಕೊಂಡಿರುವವರಿಗೆ ಸ್ಥೈರ್ಯ ತುಂಬುವ ಸಲುವಾಗಿ ಬರೆದಿರುವ 'ಮೃತ್ಯುಮಿತ್ರ' ಎಂಬ ಸಂಗ್ರಹಯೋಗ್ಯ ಪುಸ್ತಕವನ್ನು ಆರ್‌ಎಸ್ಎಸ್‌ನ ಹಿರಿಯ ಪ್ರಚಾರಕ ನ. ಕೃಷ್ಣಪ್ಪ ಅವರು ಬರೆದಿದ್ದಾರೆ. ಆ ಪುಸ್ತಕಕ್ಕೆ ಟಿ.ಎನ್.ಸೀತಾರಾಮ್ ರವರು ಬರೆದ ಮುನ್ನುಡಿ ಇಲ್ಲಿದೆ.












Click it and Unblock the Notifications