ತಿಂಗಳ ಕೊನೆ ಮಂಗಳವಾರ ಕೆ.ಆರ್.ಮಾರ್ಕೆಟ್ ಬಂದ್

ಕಸ ಸಂಸ್ಕರಣೆ ಬಗ್ಗೆ ಮಾಹಿತಿ ಪಡೆಯಲು ಶುಕ್ರವಾರ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿದ್ದ ಸಿದ್ಧಯ್ಯ, ಮಾರುಕಟ್ಟೆಯನ್ನು ಶುಚಿಯಾಗಿಡುವ ಉದ್ದೇಶದಿಂದ ಮಾರುಕಟ್ಟೆಗೆ ಪ್ರತಿ ತಿಂಗಳ ಕೊನೆಯ ಮಂಗಳವಾರ ರಜೆ ನೀಡಲಾಗುತ್ತದೆ. ಅಂದು ಎಲ್ಲಾ ವ್ಯಾಪಾರಿಗಳು ಸೇರಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದ್ದಾರೆ.
ಮಾರುಕಟ್ಟೆಯ ಸ್ಚಚ್ಛತೆ ಕುರಿತು ವ್ಯಾಪಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ವ್ಯಾಪಾರಿಗಳು ಕಸವನ್ನು ರಸ್ತೆಗೆ ಸುರಿಯಬಾರದು. ಅಂದಿನ ಕಸವನ್ನು ಅಂದೇ ವಿಲೇವಾರಿ ಮಾಡಿಬೇಕು ಎಂದು ಸಲಹೆ ನೀಡಿದರು. ಕೆ.ಆರ್.ಮಾರುಕಟ್ಟೆ ಕಸ ವಿಲೇವಾರಿಯ ಉಸ್ತುವಾರಿಗಾಗಿಯೇ ಸಹಾಯಕ ಅಭಿಯಂತರು ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ನೇಮಿಸಲಾಗುವುದು ಎಂದರು.
ಕೆ.ಆರ್.ಮಾರುಕಟ್ಟೆ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗುವುದು. ಘಟಕದಿಂದ ಬರುವ ಹಣವನ್ನು ಮಾರುಕಟ್ಟೆಯ ಅಭಿವೃದ್ಧಿಗಾಗಿ ಬಳಸಲಾಗುವುದು ಎಂದು ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ಮಾರುಕಟ್ಟೆಗಳಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.
ಅಗತ್ಯವಿತ್ತು ಮಾರುಕಟ್ಟೆ ಬಂದ್ : ಸದಾ ಜನಜಂಗುಳಿಯಿಂದ ತುಂಬಿರುವ ತಾಣ ನಗರದ ಪ್ರಮುಖ ಮಾರುಟ್ಟೆಗಳು. ಕೆ.ಆರ್.ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನರು ತುಂಬಿ ಹೋಗಿರುತ್ತಾರೆ. ಇನ್ನೂ ಹಬ್ಬ ಬಂತೆಂದರೆ ಮಾರುಕಟ್ಟೆ ಅಕ್ಷರಶಃ ಜನರಿಂದ ಕಿಕ್ಕಿರಿದು ಹೋಗುತ್ತದೆ.
ಹೂವು, ತರಕಾರಿ, ಹಣ್ಣು, ಬಾಳೆಎಲೆ, ಬಾಳೆಗಿಡ, ಕಬ್ಬು ಹೀಗೆ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿರುತ್ತದೆ. ಬೆಳಗ್ಗೆ 5 ಗಂಟೆಯಿಂದಲೇ ಹೂವಿನ ವ್ಯಾಪಾರ ಪ್ರಾರಂಭವಾಗುವ ಮಾರುಕಟ್ಟೆಯಲ್ಲಿ ರಾತ್ರಿ 12ರ ವರೆಗೂ ವ್ಯಾಪಾರ ವಹಿವಾಟು ನಡೆಯುತ್ತದೆ. ನಂತರ ಸರಕುಗಳನ್ನು ಹೊತ್ತ ಲಾರಿಗಳು ಮಾರುಕಟ್ಟೆಗೆ ಬರುತ್ತವೆ.
ಆದ್ದರಿಂದ ದಿನದ 24 ಗಂಟೆಯೂ ಮಾರುಕಟ್ಟೆ ತುಂಬಿಹೋಗಿರುತ್ತದೆ. ಪೌರಕಾರ್ಮಿಕರಿಗೂ ಮಾರುಕಟ್ಟೆಯ ಕಸ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಸದ್ಯ ಬಿಬಿಎಂಪಿ ಆಯುಕ್ತ ಸಿದ್ಧಯ್ಯನವರ ಹೊಸ ಕ್ರಮ ಎಷ್ಟು ಸಕ್ರಿಯವಾಗಿ ಜಾರಿಗೆ ಬರುತ್ತದೆ ಕಾದು ನೋಡಬೇಕು.












Click it and Unblock the Notifications