ಆಟೋಗೆ ಕಾಯಬೇಡಿ, ಎರಡು ದಿನ ಆಟೋ ಸಂಚರಿಸಲ್ಲ

ಮುಷ್ಕರದ ಬಗ್ಗೆ ಮಾಹಿತಿ ನೀಡಿದ ಆಟೋ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಪೆಟ್ರೋಲ್, ಎಲ್ ಪಿ ಜಿ ದರ ಏರಿಕೆಯಾಗಿದೆ. ಆದರೆ, ಆಟೋ ಪ್ರಯಾಣದರನ್ನು ಹೆಚ್ಚಿಸಿಲ್ಲ. ಇದರಿಂದ ಚಾಲಕರಿಗೆ ನಷ್ಟ ಉಂಟಾಗುತ್ತಿದೆ.
ಆದ್ದರಿಂದ ಪ್ರಯಾಣ ದರ ಹೆಚ್ಚಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಫೆ.20 ಮತ್ತು 21ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಎರಡು ದಿನ ಆಟೋಗಳ ಸಂಚಾರವಿರುವುದಿಲ್ಲ. ರಾಜ್ಯಾದ್ಯಂತ ಮುಷ್ಕರ ನಡೆಸಲು ಸಮಿತಿ ತೀರ್ಮಾನಿಸಿದೆ. ಬಸ್, ರೈಲ್ವೇ ನಿಲ್ದಾಣಗಳ ಬಳಿ ಕರಪತ್ರ ಅಂಟಿಸುವ ಎಲ್ಲಾ ಆಟೋ ಚಾಲಕರಿಗೆ ಮುಷ್ಕರದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದರು.
ಆಟೋ ಚಾಲಕರಿಗೆ ಕಡ್ಡಾಯವಾಗಿ ಮುಷ್ಕರದಲ್ಲಿ ಭಾಗವಹಿಸುವಂತೆ ಒತ್ತಡ ಹಾಕುವುದಿಲ್ಲ. ಚಾಲಕರು ಸ್ವಯಂ ಪ್ರೇರಿತವಾಗಿ ಭಾಗವಹಿಸುತ್ತಾರೆ. ಎರಡು ದಿನ ಆಟೋಗಳ ಸಂಚಾರವಿಲ್ಲದಿದ್ದರೆ ಸಾರ್ವಜಕರಿಗೆ ತೊಂದರೆ ಆಗಲಿದೆ. ಅಪಾರ ನಷ್ಟ ಉಂಟಾಗುತ್ತಿರುವುದರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿದರು.
ಇತರ ಬೇಡಿಕೆಗಳೇನು?
* ಆಟೋ ಚಾಲಕರಿಗೆ ಬಿಪಿಎಲ್ ಕಾರ್ಡ್ ನೀಡಬೇಕು
* ಡಿಎಲ್ ಪಡೆಯಲು 8ನೇ ತರಗತಿ ಓದಿರಬೇಕೆಂಬ ನಿಯಮ ರದ್ದುಗೊಳಿಸಬೇಕು
* ಹಳೆ ಆಟೋ ಬದಲಾಯಿಸಿ ನೂತನ ಆಟೋ ಖರೀದಿಸಲು 30 ಸಾವಿರ ಸಬ್ಸಿಡಿ ಕೊಡಬೇಕು
* ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳಲು ಮೂರು ಸಾವಿರ ಸಬ್ಸಡಿ ನೀಡಬೇಕು
* ಹೌಸಿಂಗ್ ಬೋರ್ಡ್ ಮತ್ತು ಬಿಡಿಎ ನಿವೇಶನಗಳನ್ನು ನೀಡುವಾಗ ಆಟೋ ಚಾಲಕರನ್ನು ಪರಿಗಣಿಸಬೇಕು.












Click it and Unblock the Notifications