ರಾಯಚೂರಲ್ಲಿ ಶ್ರೀರಾಮುಲು ಭರ್ಜರಿ ಶಕ್ತಿ ಪ್ರದರ್ಶನ

ಲಿಂಗಸೂರು ರಸ್ತೆಯ ಸಾತ್ ಮೈಲ್ ಕ್ರಾಸ್ ಬಳಿಯ ಮೈದಾನದಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿ.ಶ್ರೀರಾಮುಲು ರಾಷ್ಟ್ರೀಯ ಪಕ್ಷಗಳು ಶೋಷಿತರ ಹಿತ ಕಾಯಲು ವಿಫಲವಾಗಿವೆ. ರಾಜ್ಯದಲ್ಲಿ ಬಿಎಸ್ಆರ್ ಕಾಂಗ್ರೆಸ್ ಶೋಷಿತರ ಅಭಿವೃದ್ಧಿಗಾಗಿಯೇ ಸ್ಥಾಪನೆಯಾಗಿದೆ ಎಂದರು.
ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಿದಾಗಲೂ ಶೋಷಿತರ ಅಭಿವೃದ್ಧಿ ಮಾಡಿಲ್ಲ ಎಂದು ದೂರಿದರು.
ರಾಷ್ಟ್ರೀಯ ಪಕ್ಷಗಳು ಶೋಷಿತ ವರ್ಗದ ನಾಯಕರು ಮುಖ್ಯಮಂತ್ರಿಯಾಗಲು ಅವಕಾಶ ನೀಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಾ.ಜಿ.ಪರಮೇಶ್ವರ್ ಮುಂತಾದ ನಾಯಕರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದರೂ ಹಿಂದುಳಿದ ವರ್ಗದವರೆಂದು ಅವರನ್ನು ಕಡೆಗಣಿಸಿದರು ಎಂದು ಹೇಳಿದರು. ಎಲ್ಲ ಕಾಂಗ್ರೆಸ್ ನಾಯಕರನ್ನು ಇಲ್ಲಿ ಪ್ರಸ್ತಾಪಿಸಿರುವುದು ಉಲ್ಲೇಖಾರ್ಹ.
ನಮ್ಮನ್ನು ಬಿಜೆಪಿ ಕಡೆಗಣಿಸಿತು : ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಜರ್ನಾದನ ರೆಡ್ಡಿ ಮತ್ತು ನಾವುಗಳು ಕಾರಣ. ಅಧಿಕಾರ ಪಡೆದ ನಂತರ ನಮ್ಮನ್ನು ಹಿಂದುಳಿದವರು ಎಂದು ಕಡೆಗಣಿಸಲಾಯಿತು. ಇಂತಹ ಪಕ್ಷಕ್ಕೆ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಬೇಕೆಂದು ಮನವಿ ಮಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ವಶಂಸ್ಥ ಆನಂದರಾಜ್ ಅಂಬೇಡ್ಕರ್, ಶಾಸಕರಾದ ಸೋಮಶೇಖರ ರೆಡ್ಡಿ, ಸುರೇಶ್ ಬಾಬು, ಸಂಸದರಾದ ಜೆ.ಶಾಂತ, ಸಣ್ಣ ಪಕೀರಪ್ಪ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ. ಪಕ್ಷದ ಮುಖಂಡರಾದ ಮದನ್ ಪಟೇಲ್, ಬಿ.ಶಿವಪ್ಪ, ಖಲೀಲ್ ಅಹ್ಮದ್ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications