115 ಸ್ಥಾನದೊಂದಿಗೆ ಬಿಜೆಪಿಗೆ ಮತ್ತೆ ಅಧಿಕಾರ ಪ್ರಾಪ್ತಿ

ಬಿಜೆಪಿ ರಾಜಸ್ತಾನದ ಪರಿಸ್ಥಿತಿಯೂ ಕರ್ನಾಟಕದಂತೆಯೇ ಇತ್ತು. ಅಲ್ಲೂ ಹಿರಿಯ ವರ್ಚಸ್ವಿ ನಾಯಕಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಕರ್ನಾಟಕದ ಯಡಿಯೂರಪ್ಪ ಮಾದರಿಯಲ್ಲಿ ಸಾಗಿದ್ದರು. ಆದರೆ ಸಕಾಲದಲ್ಲಿ ಎಚ್ಚೆತ್ತ ಬಿಜೆಪಿ ವರಿಷ್ಠರು, ವಸುಂಧರಾರನ್ನು ಪಕ್ಷದಲ್ಲೇ ಕಟ್ಟಿಹಾಕಲು ಯಶಸ್ವಿಯಾಗಿದ್ದಾರೆ. ಹಾಗಂತ ಮುಂದಿನ ವಿಧಾನಸಭೆ ಚುನಾವಣೆಗಾಗಿ ಕಳೆದ ವಾರ ಅವರಿಗೆ ಪಕ್ಷದ ಸಾರಥ್ಯವನ್ನು ವಹಿಸಲಾಗಿದೆ.
ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾದರಿಯಲ್ಲೇ ಹೊಸ ಪ್ರಾದೇಶಿಕ ಪಕ್ಷ ಕಟ್ಟಲೂ ಮುಂದಾಗಿದ್ದ ವಸುಂಧರಾ ರಾಜೇ ಅವರು ಸಹ ತಮ್ಮ ಭಿನ್ನಾಭಿಪ್ರಾಯಗಳನ್ನೆಲ್ಲ ಬಗೆಹರಿಸಿಕೊಂಡಿದ್ದು, ಈಗ ತಮ್ಮ ಮೂಲ ಪಕ್ಷವನ್ನೇ ಡಿಸೆಂಬರ್ ಚುನಾವಣೆಯಲ್ಲಿ ಮುನ್ನಡೆಸಲು ತೀರ್ಮಾನಿಸಿದ್ದಾರೆ.
ಹೀಗೆ ವಸುಂಧರಾ ರಾಜೆ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಿದ್ಧವಾಗಿದ್ದೇ ತಡ, ಅತ್ತ ರಾಜಸ್ಥಾನದ ಮುಂದಿನ ವಿಧಾನಸಭೆ ಚುನಾವಣೆ ಕುರಿತು ಸಮೀಕ್ಷಾ ಫಲಿತಾಂಶವೊಂದು ಹೊರಬಿದ್ದಿದೆ.
ಮತ್ತು, ಅದು ವಸುಂಧರಾ ರಾಜೆ ಅವರಿಗೆ ಆಶಾದಾಯಕವಾಗಿದೆ. ವಸುಂಧರಾ ಅವರು 110-15 ಸ್ಥಾನಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಲಿದೆ ಎಂಬುದು ಆ ಸಮೀಕ್ಷೆಯ ತಿರುಳು. 200 ಸದಸ್ಯರ ರಾಜಸ್ಥಾನ ವಿಧಾನ ಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಈ ಬಾರಿ 65-70 ಸೀಟು ಗೆಲ್ಲಬಹುದಷ್ಟೇ ಎನ್ನಲಾಗಿದೆ.












Click it and Unblock the Notifications