ದೀನ್ ದಯಾಳರಿಗೆ ಬಿಜೆಪಿ ಶಾಸಕರ ನಮನ

ಕರ್ನಾಟಕ ಬಿಜೆಪಿಯ ಕಮ್ಯುನಿಕೇಷನ್ ವಿಭಾಗದ ಸಂಚಾಲಕ ಚೆನ್ನಮಲ್ಲಿಕಾರ್ಜುನ ಪಾಟೀಲ್ ಸೋಮವಾರ ಸಂಜೆ ಒನ್ ಇಂಡಿಯಾ ಕನ್ನಡಕ್ಕೆ ಈ ವಿಷಯ ತಿಳಿಸಿದರು. ಈ ದಿವಸವನ್ನು 'ಸಮರ್ಪಣಾ ದಿನ' ಎಂದು ಆಚರಿಸಲಾಗುತ್ತಿದೆ.
ಅಲ್ಲದೆ, ಇಂದು ಸಂಜೆ ಬಿಜೆಪಿಯ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಭಾಪತಿ ಡಿ ಎಚ್ ಶಂಕರಮೂರ್ತಿ ಅವರ ಬೆಂಗಳೂರು ನಿವಾಸದಲ್ಲಿ ಕಲೆಯುತ್ತಾರೆ. ಅಲ್ಲಿ ಆಯೋಜಿಸಲಾಗಿರುವ ದೀನ್ ದಯಾಳ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪಾಟೀಲ್ ತಿಳಿಸಿದರು.
ಪುಣ್ಯತಿಥಿ : ಪಂಡಿತ ದೀನದಯಾಳ ಉಪಾಧ್ಯಾಯರು ಭಾರತ ಕಂಡ ಅದ್ಭುತ ದಾರ್ಶನಿಕ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಪತ್ರಕರ್ತ ಮತ್ತು ರಾಜಕೀಯ ಕಾರ್ಯಕರ್ತ. ಇವರ ಜನನ 1916ರ ಸೆಪ್ಟೆಂಬರ್ 25 ಮತ್ತು ಮರಣ 1968ರ ಫೆಬ್ರವರಿ 11. ಅಂದಿನ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ರಾಜಕೀಯ ಶಕ್ತಿಯನ್ನು ಪೋಷಿಸಿದವರು. ಇಂದು ಅವರ 45 ನೇ ಪುಣ್ಯತಿಥಿ.
ಅವರು ಕಾಲವಾದ ನಂತರ ಭಾರತೀಯ ಜನಸಂಘವು ಭಾರತೀಯ ಜನತಾ ಪಕ್ಷವಾಗಿ ಮಾರ್ಪಟ್ಟು ಇಂದಿನ ಬಿಜೆಪಿ ಉದಯಕ್ಕೆ ಕಾರಣವಾಯಿತು. ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಗಲಾ ಚಂದ್ರವನ ಗ್ರಾಮದಲ್ಲಿ ದೀನದಯಾಳ ಉಪಾಧ್ಯಾಯರು ಜನಿಸಿದರು. ಅವರ ತಂದೆ ಭಗವತಿ ಪ್ರಸಾದ್ ಅವರು ಖ್ಯಾತ ಜ್ಯೋತಿಷಿಯಾಗಿದ್ದರು.
ದೀನದಯಾಳರು 3 ವರ್ಷದವರಾಗಿದ್ದಲೇ ತಂದೆಯನ್ನು ಕಳೆದುಕೊಂಡರು. ಮುಂದೆ, ಅವರ ತಾಯಿ ಶ್ರೀಮತಿ ರಾಮ್ ಪ್ಯಾರಿ ಅವರೇ ದೀನದಯಾಳರ ಭವಿಷ್ಯವನ್ನು ರೂಪಿಸುವ ಹೊಣೆಹೊತ್ತರು. ಆದರೆ ದೀನದಯಾಳರಿಗೆ 8 ವರ್ಷವಾದಾಗ ಅವರ ತಾಯಿಯೂ ಇಹಲೋಕ ತ್ಯಜಿಸಿದರು. ಚಿಕ್ಕ ವಯಸ್ಸಿನಲ್ಲೇ ಅಪ್ಪ-ಅಮ್ಮನನ್ನು ಕಳೆದುಕೊಂಡ ದೀನದಯಾಳ್ ಶಿಕ್ಷಣದಲ್ಲಿ ಅಪ್ರತಿಮ ಬುದ್ಧಿಮತ್ತೆ ತೋರಿದ.
ಸಿಕಾರ್ ಮಹಾರಾಜ ಕಲ್ಯಾಣ್ ಸಿಂಗ್ ದೀನದಯಾಳರಿಗೆ ಬಂಗಾರದ ಪದಕ ನೀಡಿ, ಆತನ ಶಿಕ್ಷಣಕ್ಕೆ ನೀರೆರೆದರು. ಮುಂದೆ ಪಿಲಾನಿಯಲ್ಲಿ ಬಿಟ್ಸ್ ಕಾಲೇಜಿನಲ್ಲಿ ಅಗ್ರ ಸ್ಥಾನದಲ್ಲಿ ವಿಜ್ಞಾನ ಪದವಿ (1939) ಪಡೆದರು. ಅದಾದನಂತರ Provincial Services Exam ಬರೆದು, ಉತ್ತೀರ್ಣರಾದರೂ ಆಡಳಿತ ಸೇವೆಗೆ ಸೀಮಿತರಾಗದೆ ಜನಸಾಮಾನ್ಯರ ಸೇವೆಗೆ ಅಂಕಿತರಾದರು.
1937ರಲ್ಲಿ ಕಾನ್ಪುರದಲ್ಲಿ ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದಾಗ ಸಹಪಾಠಿ ಬಾಲೂಜಿ ಮಹಾಶಬ್ದೆ ಮೂಲಕ RSSಗೆ ಪರಿಚಿತರಾದರು. ಆಗಲೇ RSS ಸ್ಥಾಪಕ ಡಾ. ಹೆಗ್ಡೆವಾರ್ ಅವರನ್ನು ಭೇಟಿ ಮಾಡಿದ್ದು. 1942ರಿಂದ ಪೂರ್ಣ ಪ್ರಮಾಣದಲ್ಲಿ RSS ಕಾರ್ಯಕರ್ತರಾದರು. ಮುಂದೆ 1951ರಲ್ಲಿ ಡಾ. ಶ್ಯಾಂ ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದಾಗ ದೀನದಯಾಳರು ಆ ಸಂಘಟನೆಯ ಮೊದಲ ಪ್ರಧಾನ ಕಾರ್ಯದರ್ಶಿಯಾದರು.
1953ರಲ್ಲಿ ಶ್ಯಾಂ ಪ್ರಸಾದರ ನಿಧನಾನಂತರ ಭಾರತೀಯ ಜನಸಂಘವನ್ನು ಮುನ್ನಡೆಸುವ ಮಹತ್ತರ ಹೊಣೆ ದೀನದಯಾಳರ ಭುಜದ ಮೇಲೆ ಬಿತ್ತು. ಮುಂದೆ, ಮೊಘಲ್ ಸರಾಯ್ ರೈಲು ನಿಲ್ದಾಣದಲ್ಲಿ ದೀನದಯಾಳರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದು ಪತ್ತೆಯಾಗಿತ್ತು.












Click it and Unblock the Notifications