ಅಧಿಸೂಚನೆಗೆ ಸಿದ್ಧತೆ: ಅಂತಿಮ ಹೋರಾಟಕ್ಕೆ ಸಜ್ಜು
ಮಂಡ್ಯ, ಫೆ.6: ಇತ್ತ ಕರ್ನಾಟಕಕ್ಕೆ ಮರಣಶಾಸನವಾಗಿ ಅತ್ತ ತಮಿಳುನಾಡಿಗೆ ಫೇವರ್ ಆಗಿ ಕಾವೇರಿ ನ್ಯಾಯ ಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸಲು ಸರ್ವಸಿದ್ಧತೆ ನಡೆದಿರುವಾಗ ರಾಜ್ಯದಲ್ಲಿ ಕಾವೇರಿ ಕೊಳ್ಳ ಅಗ್ನಿಕುಂಡವಾಗಿ ಕುದಿಯಲಾರಂಭಿಸಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಅಧಿಸೂಚನೆ ಹೊರಡಿಸಿ ಎಂದು ಕೇಂದ್ರ ಸರಕಾರಕ್ಕೆ ಸ್ವತಃ ಸುಪ್ರೀಂಕೋರ್ಟೇ ನಿರ್ದೇಶನ ನೀಡಿರುವುದು ಕರ್ನಾಟಕದ ರೈತರನ್ನು ಬಡಿದೆಬ್ಬಿಸಿದೆ.
ಕೇಂದ್ರ ಸರ್ಕಾರ ಮನಸು ಮಾಡಿದರೆ ದಾರಿಗಳನ್ನು ಹುಡುಕುವುದು ಕಷ್ಟವಿಲ್ಲ. ಆದರೆ, ಅದಕ್ಕೆ ಬೇಕಾಗಿಲ್ಲ. ಸಂಸತ್ತಿನಲ್ಲಿ ಅನೇಕ ಮಸೂದೆಗಳನ್ನು ಅಂಗೀಕರಿಸಲು ಡಿಎಂಕೆ ಬೆಂಬಲ ಅಗತ್ಯ ಇದೆ. ಹಾಗಾಗಿ ಕರ್ನಾಟಕಕ್ಕೆ ಅನ್ಯಾಯವೆಸುಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಏನಂತಾರೆ?
ಕಾವೇರಿ ಐತೀರ್ಪಿನ ಅಂತಿಮ ಅಧಿಸೂಚನೆ ಪ್ರಕಟಿಸಿದರೆ ರಾಜ್ಯದ ಪಾಲಿಗೆ ಅದು ಮರಣ ಶಾಸನವಾಗಲಿದೆ. ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರಿಗೆ ಸಮಸ್ಯೆ ಇದೆ. ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿಯಬೇಕು. ಆದರೆ ಅಧಿಸೂಚನೆ ಪ್ರಕಟಿಸಲು ತನ್ನ ತಕರಾರಿಲ್ಲ ಎಂದು ಸರಕಾರ ಸುಪ್ರೀಂಕೋರ್ಟಿಗೆ ತಿಳಿಸಿದ್ದು, ಇದರಿಂದಲೇ ರಾಜ್ಯಕ್ಕೆ ಅನ್ಯಾಯ ಆಗಲಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ರೇವಣ್ಣ:
ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ತಕ್ಷಣವೇ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಬೇಕು. ಈ ವಿಷಯದಲ್ಲಿ ಎಲ್ಲ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ನೀಡಲು ಸಿದ್ಧ ಎಂದೂ ಗುಡುಗಿದ್ದಾರೆ.

ಕೆಆರ್‌ಎಸ್ ಉಸ್ತುವಾರಿ ನಮಗೇ ಬಿಡಿ:
ನೀರಿನ ವ್ಯಾಜ್ಯ ಸುಪ್ರೀಂಕೋರ್ಟಿನಲ್ಲಿ ಸುಲಭವಾಗಿ ಬಗೆಹರಿಯುವಂತಹದ್ದಲ್ಲ. ಅಣೆಕಟ್ಟೆ ಬೀಗವನ್ನು ಸಮಿತಿಗೆ ಒಪ್ಪಿಸಿಬಿಡಿ ಎಂಬ ಒತ್ತಾಯ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬಳಿಗೆ ಫೆ.6 ರಂದು ತೆರಳಿ ಮನವಿ ಸಲ್ಲಿಸುತ್ತೇವೆ.ಕೀಯನ್ನು ಸಿಎಂ ಶೆಟ್ಟರ್ ಒಪ್ಪಿಸಲು ನಿರಾಕರಿಸಿದರೆ ಕೆಆರ್‌ಎಸ್ ಮುತ್ತಿಗೆ ಹಾಕುತ್ತೇವೆ - ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ ಮಾದೇಗೌಡ.

ಮಾಜಿ ಪ್ರಧಾನಿ ದೇವೇಗೌಡ (ದೆಹಲಿಯಲ್ಲಿ):
ರಾಜ್ಯಕ್ಕಿದು ಅತ್ಯಂತ ಸಂಕಷ್ಟದ ಕಾಲ. ರಾಜಕೀಯ ನಾಯಕರು, ಸಾರ್ವಜನಿಕರು, ಹೋರಾಟಗಾರರು ತಾಳ್ಮೆ-ಸಂಯಮದಿಂದ ವರ್ತಿಸಬೇಕು. ಒಟ್ಟಾಗಿ ಸಂಕಷ್ಟದಿಂದ ಪಾರಾಗುವ ದಾರಿ ಹುಡುಕಬೇಕು.ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಮೂಲವನ್ನು ನೀವೇ ಹುಡುಕಿಕೊಳ್ಳಿ ಎಂದು ನ್ಯಾಯಮಂಡಳಿ ಸಲಹೆ ಮಾಡಿದೆ. ತಾಲೂಕು ಕೇಂದ್ರ ಹಾಗೂ ಹಳ್ಳಿಗಳಿಗೆ ಲಭ್ಯವಿರುವ 8 ಟಿಎಂಸಿ ಅಡಿ ಅಂತರ್ಜಲ ಬಳಸುವಂತೆ ಹೇಳಿದೆ. ಆದರೆ, ತಮಿಳುನಾಡು ತನ್ನಲ್ಲಿ 30 ಟಿಎಂಸಿ ಅಡಿ ಅಂತರ್ಜಲವಿದೆ ಎಂದು ಒಪ್ಪಿಕೊಂಡಿದ್ದರೂ ನ್ಯಾಯಮಂಡಳಿ ರಿಯಾಯ್ತಿ ನೀಡಿದೆ.ಇದು ಕಠೋರ.

ಸಿಎಂ ಶೆಟ್ಟರ್ ವಿಧಾನಸಭೆಯಲ್ಲಿ...
ಸರಕಾರ ಸಮರ್ಥವಾಗಿಯೇ ವಾದ ಮಂಡಿಸಿದೆ. ಪ್ರಧಾನಿ ಭೇಟಿಗೆ ಕಾಲಾವಕಾಶ ಕೊರಿದ್ದು, ಅವರ ಭೇಟಿ ಸಾಧ್ಯವಾಗಿಲ್ಲ. ಕಾವೇರಿ ಅಧಿಸೂಚನೆ ಕುರಿತಂತೆ ಎಲ್ಲ ರೀತಿಯ ಕಾನೂನು ಹೋರಾಟವನ್ನು ಎಲ್ಲ ಹಂತದಲ್ಲೂ ಮಾಡಿದ್ದೇವೆ. ಇಂದು ವಿಧಾನ ಮಂಡಲದ ವಿರೋಧ ಪಕ್ಷಗಳ ನಾಯಕರುಗಳ ಸಭೆ ಕರೆದು ಈ ವಿಚಾರದ ಪರಿಹಾರ ಸೂತ್ರದ ಕುರಿತು ಚರ್ಚಿಸಲಾಗುವುದು. ಪಕ್ಷಾತೀತವಾಗಿ ಸಮಸ್ಯೆಗೆ ಪರಿಹಾರ ಹುಡುಕೋಣ ಎಂದು ಪ್ರತಿಪಕ್ಷ ನಾಯಕರಿಗೆ ಶೆಟ್ಟರ್ ಕರೆ.












Click it and Unblock the Notifications